ಮಂಡ್ಯ: ಕೋಮುದ್ವೇಷದ ವಿರುದ್ಧ ಸೌಹಾರ್ದತೆಯ ಮಾನವ ಸರಪಳಿ; ಸಾಮರಸ್ಯ ಕದಡುವ ಶಕ್ತಿಗಳ ವಿರುದ್ಧ ರಣಕಹಳೆ

Update: 2018-01-30 17:53 GMT

ಮಂಡ್ಯ, ಜ.30: ಶಾಂತಿ ದೂತ ಮಹಾತ್ಮಗಾಂಧಿ ಅವರ ಹುತಾತ್ಮ ದಿನದ ಅಂಗವಾಗಿ ದೇಶದಲ್ಲಿ ಹೆಚ್ಚುತ್ತಿರುವ ಕೋಮುದ್ವೇಷವನ್ನು ತೊಲಗಿಸಿ ಸೌಹಾರ್ದ ವಾತಾವರಣ ಸೃಷ್ಠಿಸುವ ಸಂದೇಶವನ್ನು ಮಂಗಳವಾರ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಸಾರಲಾಯಿತು.

ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸೌಹಾರ್ದತೆಗಾಗಿ ಕರ್ನಾಟಕ ಪರಿಕಲ್ಪನೆಯಲ್ಲಿ ರಾಜ್ಯವ್ಯಾಪಿ ನಡೆದ ಈ ಕಾರ್ಯಕ್ರಮದಲ್ಲಿ ಚಿಂತಕರು,  ಸಾಹಿತಿಗಳು,  ಕಲಾವಿದರು, ಸಾವಿರಾರು ಮಂದಿ ವಿದ್ಯಾರ್ಥಿ ಯುವಜನರು ಪಾಲ್ಗೊಂಡು ಸಮಾಜದ ಸಾಮರಸ್ಯ ಕದಡುವ ಶಕ್ತಿಗಳ ವಿರುದ್ಧ ರಣಕಹಳೆ ಮೊಳಗಿಸಿದರು.

ಮಂಡ್ಯದ ಸಂಜಯ ವೃತ್ತದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಪಿಇಟಿ ಅಧ್ಯಕ್ಷ ಡಾ.ಎಚ್.ಡಿ.ಚೌಡಯ್ಯ, ಕೋಮು ಸಂಘರ್ಷವನ್ನು ಉಂಟುಮಾಡುತ್ತಿರುವ ಶಕ್ತಿಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಈ ದಿನದ ಮಾನವ ಸರಪಳಿ ಕೋಮು ಸೌಹಾರ್ದತೆ ಎತ್ತಿಹಿಡಿಯುವ ಸಂದೇಶವನ್ನು ಸಾರುತ್ತಿದೆ ಎಂದು ಶ್ಲಾಘಿಸಿದರು.

ಜನರು ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ನಾವೆಲ್ಲಾ ಒಂದೇ ಎನ್ನುವ ಐಕ್ಯತೆಯನ್ನು ಪ್ರದರ್ಶನ ಮಾಡುವುದು ಇಂದು ಅತ್ಯಂತ ಅಗತ್ಯವಾಗಿದೆ. ನಾಡಿನ ಶಾಂತಿ, ಸೌಹಾರ್ದತೆಗೆ ಧಕ್ಕೆ ಬಾರದಂತೆ ಕಾಪಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ಮಾಜಿ ಸಂಸದ ಡಾ.ಜಿ.ಮಾದೇಗೌಡ ಮಾತನಾಡಿ, ಜಾತಿ, ಧರ್ಮವನ್ನು ರಾಜಕೀಯ ಪಕ್ಷಗಳು ಅಸ್ತ್ರ ಮಾಡಿಕೊಂಡಿವೆ. ಆ ಮೂಲಕ ಕೋಮು ಗಲಭೆಗಳನ್ನು ಸೃಷ್ಟಿಸಿ ಸಮಾಜದ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರೊ.ಜಿ.ಟಿ.ವೀರಪ್ಪ ಮಾತನಾಡಿ, ಇಡೀ ಕರ್ನಾಟಕ ಶಾಂತಿ, ಸೌಹಾರ್ದ, ಸಹಬಾಳ್ವೆಗೆ ಹೆಸರಾದ ನಾಡಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾತಿ,  ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕೋಮು ಗಲಭೆ, ದ್ವೇಷ, ಅತ್ಯಾಚಾರ, ಕೊಲೆ, ಮಾನವ ಜನಾಂಗ ತಲೆತಗ್ಗಿಸುವಂತೆ ಮಾಡಿದೆ ಎಂದು ಹೇಳಿದರು.

ಶರಣರು, ದಾಸರು, ಚಿಂತಕರು, ಪಂಪ, ಕುವೆಂಪು, ದ.ರಾ.ಬೇಂದ್ರೆ ಮುಂತಾದ ಕವಿ-ಸಾಹಿತಿಗಳು ಮಾನವೀಯತೆಯನ್ನು ಎತ್ತಿ ತೋರುವ ಸಂದೇಶ ನೀಡಿದ್ದಾರೆ. ಯುವ ಜನಾಂಗ ಮಾನವೀಯ ದೃಷ್ಟಿಯಿಂದ ಸಮಾಜವನ್ನು ಸುಸ್ಥಿತಿಯಲ್ಲಿಡಬೇಕಾದ ಸಂದರ್ಭ ಬಂದಿದೆ ಎಂದರು.

ಪ್ರೊ.ಹುಲ್ಕರೆ ಮಹಾದೇವ ಮಾತನಾಡಿ, ಈ ದೇಶದ ತ್ಯಾಗ, ಬಲಿದಾನ, ಉತ್ತಮ ಪರಂಪರೆಯನ್ನು ಅಣಕಿಸುವ ರೀತಿಯಲ್ಲಿ ಅತ್ಯಾಚಾರ, ದ್ವೇಷ, ಫ್ಯಾಸಿಸ್ಟ್ ದಬ್ಬಾಳಿಕೆಗಳನ್ನು ಪ್ರತಿನಿತ್ಯ ನಾವು ನೋಡುತ್ತಿದ್ದೇವೆ. ಇದು ಈಗಿನ ಸಮಾಜಕ್ಕೆ, ಮುಂದಿನ ಪೀಳಿಗೆಗೆ ಆತಂಕದ ಬೆಳವಣಿಗೆಯಾಗಿದೆ. ಅಶಾಂತಿ, ದ್ವೇಷ, ಮತ್ಸರ, ಕೊಲೆ ವ್ಯಾಪಕವಾಗಿ ನಡೆಯುತ್ತಿದೆ. ಜನ ಮನಸ್ಸು ಮಾಡಿದರೆ ಎಲ್ಲವನ್ನೂ ಬೇರು ಸಮೇತ ಕಿತ್ತುಹಾಕಿ,ನೆಮ್ಮದಿಯ ವಾತಾವರಣ ನಿರ್ಮಿಸಬಹುದು ಎಂದು ಹೇಳಿದರು. 

ಡಾ.ಚಿಕ್ಕಮರಳಿ ಬೋರೇಗೌಡ, ವಿಚಾರವಾದಿ ಕೆ.ಮಾಯಿಗೌಡ, ಗುರುಪ್ರಸಾದ್ ಕೆರಗೋಡು, ಎಂ.ಬಿ.ಶ್ರೀನಿವಾಸ್,  ಪ್ರೊ.ಚಂದ್ರಶೇಖರನ್, ಸಿ.ಕುಮಾರಿ,  ನಾರಾಯಣ್,  ಬೆಂಜಮಿನ್ ಥಾಮಸ್, ಶಂಭೂನಹಳ್ಳಿ ಸುರೇಶ್, ಲತಾಶಂಕರ್, ಹಲ್ಲೇಗೆರೆ ಶಿವರಾಂ, ರವಿ ಚಂದಗಾಲು, ಡಾ.ರಾಮಲಿಂಗಯ್ಯ, ಎಂ.ಪುಟ್ಟಮಾದು, ಎನ್.ಎಲ್.ಭರತರಾಜ್, ಎಂ.ಬಿ.ನಾಗಣ್ಣಗೌಡ, ಎಂ.ಕೃಷ್ಣಮೂರ್ತಿ, ಎಚ್.ವಿ.ಜಯರಾಂ, ಷಣ್ಮುಖೇಗೌಡ, ಗಾಮನಹಳ್ಳಿ ಸ್ವಾಮಿ, ನಾಗರಾಜು, ಸಂತೋಷ್, ಸಿದ್ದರಾಜು,  ಅವಿನಾಶ್,  ಡೇವಿಡ್,  ರಿಜ್ಞಾನ್, ಅಬ್ದುಲ್ಲಾ, ಎಂ.ರವೀಂದ್ರ, ಎಂ.ಪುಟ್ಟಮಾದು, ಚಂದ್ರಶೇಖರ್, ಗಾಯತಿ, ಪ್ರಮೀಳಾ, ಮಂಜುಳ, ಪುಷ್ಪಾವತಿ, ಶೋಭಾ, ಹುರುಗಲವಾಡಿ ರಾಮಯ್ಯ, ಪುಟ್ಟಮ್ಮ, ಲಕ್ಷ್ಮಿ, ಮಹದೇವಮ್ಮ, ವೆಂಕಟಲಕ್ಷ್ಮಿ, ಲಿಂಗರಾಜು, ಶ್ರೀನಿವಾಸ್,  ಶಿವಕುಮಾರ್ ಹಲ್ಲೇಗೆರೆ ಹಾಗೂ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News