ಝಿಯಾಖಾನ್ ಆತ್ಮಹತ್ಯೆ ಪ್ರಕರಣ: ಸೂರಜ್ ಪಾಂಚೋಲಿ ವಿರುದ್ಧ ದೋಷಾರೋಪ

Update: 2018-01-30 18:14 GMT

ಮುಂಬೈ, ಜ.30: ನಟಿ ಝಿಯಾಖಾನ್ ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ ನೀಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ಸೂರಜ್ ಪಾಂಚೋಲಿ ವಿರುದ್ಧ ಮುಂಬೈಯ ಸೆಷನ್ಸ್ ಕೋರ್ಟ್ ದೋಷಾರೋಪ ಹೊರಿಸಿದೆ.

 27ರ ಹರೆಯದ ನಟನ ವಿರುದ್ಧ ಭಾರತೀಯ ದಂಡ ಸಂಹಿತೆಯ 306ನೇ ಪರಿಚ್ಛೇದ(ಆತ್ಮಹತ್ಯೆಗೆ ದುಷ್ಪ್ರೇರಣೆ)ದಡಿ ದೋಷಾರೋಪ ರೂಪಿಸಲಾಗಿದೆ. ಸೂರಜ್ ತಾನು ನಿರ್ದೋಷಿಯೆಂದು ವಾದಿಸಿದ್ದು ಸಾಕ್ಷಿಗಳ ವಿಚಾರಣೆ ಫೆ.14ರಿಂದ ನಡೆಯಲಿದೆ ಎಂದು ವಕೀಲರು ತಿಳಿಸಿದ್ದಾರೆ.

   ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರ ನಿರ್ವಹಿಸಿದ್ದ ‘ನಿಶ್ಯಬ್ದ್’ ಸಿನೆಮದಲ್ಲಿ ನಿರ್ವಹಿಸಿದ ಪಾತ್ರದಿಂದ ಪ್ರಸಿದ್ಧರಾಗಿದ್ದ ಜಿಯಾಖಾನ್ 2013ರ ಜೂನ್ 3ರಂದು ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಎರಡು ದಿನ ಪಾಂಚೋಲಿ ಮನೆಯಲ್ಲಿದ್ದ ಝಿಯಾಖಾನ್, ಘಟನೆ ನಡೆದ ದಿನ ಬೆಳಿಗ್ಗೆ ತನ್ನ ಮನೆಗೆ ಬಂದಿದ್ದಳು ಎಂದು ಅವರ ತಾಯಿ ತಿಳಿಸಿದ್ದರು. ವಿಚಾರಣೆ ಸಂದರ್ಭ ಪಾಂಚೋಲಿ ಕೆಲವು ಮಾಹಿತಿಗಳನ್ನು ಮರೆಮಾಚುತ್ತಿದ್ದಾರೆ ಎಂದು ಸಿಬಿಐ ದೂರಿತ್ತು.

ಬಾಲಿವುಡ್‌ನ ನಟರಾದ ಆದಿತ್ಯ ಪಾಂಚೋಲಿ ಹಾಗೂ ಝರೀನಾ ವಹಾಬ್ ದಂಪತಿಯ ಪುತ್ರ ಸೂರಜ್ ಪಾಂಚೋಲಿ ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಬೇಕೆಂಬ ಸಿಬಿಐ ಒತ್ತಾಯವನ್ನು ಸೂರಜ್ ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News