ಮಹಿಳೆಯರನ್ನು ದುರ್ಬಲಗೊಳಿಸುವ ಬಿಜೆಪಿ, ಆರೆಸ್ಸೆಸ್ ಸಿದ್ಧಾಂತ: ರಾಹುಲ್ ಗಾಂಧಿ

Update: 2018-01-31 15:17 GMT

ಶಿಲೋಂಗ್, ಜ.31: ಚುನಾವಣೆಗೆ ಸಿದ್ಧವಾಗುತ್ತಿರುವ ಮೇಘಾಲಯದಲ್ಲಿ ಬುಧವಾರದಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರೆಸ್ಸೆಸ್ ದೇಶಾದ್ಯಂತ ತನ್ನ ಸಿದ್ಧಾಂತವನ್ನು ಹೇರುತ್ತಿದೆ ಎಂದು ಆರೋಪಿಸಿದರು.

ಮೇಘಾಲಯದ ರಾಜಧಾನಿ ಶಿಲೋಂಗ್‌ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಾವು ದೇಶಾದ್ಯಂತ ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತದ ವಿರುದ್ಧ ಹೋರಾಡುತ್ತಿದ್ದೇವೆ. ಒಂದೇ ರೀತಿಯ ಚಿಂತನೆಯನ್ನು ದೇಶದ ಮೇಲೆ ಹೇರಲಾಗುತ್ತಿದೆ. ಬಿಜೆಪಿ ಮತ್ತು ಆರೆಸ್ಸೆಸ್ ದೇಶಾದ್ಯಂತ, ಮುಖ್ಯವಾಗಿ ಈಶಾನ್ಯ ರಾಜ್ಯಗಳಲ್ಲಿ ನಿಮ್ಮ ಸಂಸ್ಕೃತಿ, ಭಾಷೆ ಮತ್ತು ಜೀವನಶೈಲಿಯನ್ನು ಕಸಿಯುವ ಪ್ರಯತ್ನವನ್ನು ಮಾಡುತ್ತಿದೆ ಎಂದರು.

ಕ್ರೈಸ್ತರೇ ಹೆಚ್ಚಾಗಿರುವ ರಾಜ್ಯದಲ್ಲಿ ರಾಹುಲ್ ಗಾಂಧಿ, ತಮ್ಮ ಪಕ್ಷವು ನಿಮ್ಮ ಸಂಸ್ಕೃತಿ ಮತ್ತು ಯೋಚನಾಶೈಲಿಯ ರಕ್ಷಣೆ ಮಾಡಲಿದೆ ಎಂದು ಭರವಸೆ ನೀಡಿದರು.

ಈ ವೇಳೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, “ಆರೆಸ್ಸೆಸ್ ಸಿದ್ಧಾಂತವೇ ಮಹಿಳೆಯರನ್ನು ದುರ್ಬಲಗೊಳಿಸುವುದಾಗಿದೆ. ಆರೆಸ್ಸೆಸ್ ನಲ್ಲಿ ಎಷ್ಟು ಮಹಿಳೆಯರು ಪ್ರಮುಖ ಸ್ಥಾನಗಳಲ್ಲಿದ್ದಾರೆ ಎಂದು ಯಾರಾದರೂ ಹೇಳಬಲ್ಲರೇ? ಬರೀ ಸೊನ್ನೆ. ನೀವು ಮಹಾತ್ಮ ಗಾಂಧಿಯ ಚಿತ್ರವನ್ನು ನೋಡಿದರೆ ಅವರ ಎರಡೂ ಕಡೆಗಳಲ್ಲಿ ಮಹಿಳೆಯರೇ ಇರುವುದನ್ನು ಕಾಣಬಹುದು. ಆದರೆ ನೀವು ಮೋಹನ್ ಭಾಗವತ್ ಅವರ ಚಿತ್ರವನ್ನು ನೋಡಿದಾಗ ಒಂದೋ ಅವರು ಏಕಾಂಗಿಯಾಗಿರುತ್ತಾರೆ ಅಥವಾ ಪುರುಷರಿಂದ ಸುತ್ತುವರಿದಿರುತ್ತಾರೆ” ಎಂದು ಕುಹಕವಾಡಿದರು.

ಕಾಂಗ್ರೆಸ್ ಮಾಡಲಿರುವ ಅತ್ಯಂತ ಪ್ರಮುಖ ಕೆಲಸವೆಂದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಪುರುಷರ ಮತ್ತು ಮಹಿಳೆಯರ ಸಂಖ್ಯೆಯನ್ನು ಸಮಾನಗೊಳಿಸುವುದು ಎಂದು ರಾಹುಲ್ ಗಾಂಧಿ ತಿಳಿಸಿದರು. ಮೇಘಾಲಯದಲ್ಲಿ ಹೆಚ್ಚುಹೆಚ್ಚು ಮಹಿಳೆಯರು ಕಾಂಗ್ರೆಸ್ ಪಕ್ಷ ಸೇರಬೇಕು. ಆಮೂಲಕ ಹೆಚ್ಚು ಮಹಿಳೆಯರನ್ನು ಆಯ್ಕೆ ಮಾಡಲು ನಮಗೆ ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್‌ಟಿಯನ್ನು ಇನ್ನಷ್ಟು ಸರಳೀಕರಣಗೊಳಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷರು ತಿಳಿಸಿದರು.

ಮಹಾತ್ಮಾ ಗಾಂಧಿ ಬಗ್ಗೆ ರಾಹುಲ್ ಗಾಂಧಿ ನೀಡಿದ ಹೇಳಿಕೆಗಾಗಿ ಅವರನ್ನು ತೀವ್ರ ತರಾಟೆಗೆ ತೆಗದುಕೊಂಡ ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷರು ಮಹಾತ್ಮಾ ಗಾಂಧಿಯನ್ನು ಅವಮಾನ ಮಾಡಿದ್ದಾರೆ. ಕೇವಲ ಹಿರಿಯ ನಾಯಕರಿಗೆ ದೈಹಿಕವಾಗಿ ಸಾಮಿಪ್ಯ ಹೊಂದಿರುವುದಕ್ಕಷ್ಟೇ ಮಹಿಳೆಯರನ್ನು ಸೀಮಿತಗೊಳಿಸುವ ಮೂಲಕ ರಾಹುಲ್ ಗಾಂಧಿ ಮಹಿಳೆಯರ ಔದಾರ್ಯವನ್ನು ಕೆಣಕಿದ್ದಾರೆ. ಮೇಘಾಲಯದ ಮಾತೃಪ್ರಧಾನ ಸಮಾಜವನ್ನು ಅವರು ಅವಮಾನ ಮಾಡಿದ್ದಾರೆ ಎಂದು ದೂರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News