ಸರಳತೆಯ ಬಗ್ಗೆ ಮೋದಿ ಭಾಷಣ ಕೇವಲ ಬೂಟಾಟಿಕೆ : ಪಾಟೀಲ್ ಪುಟ್ಟಪ್ಪ

Update: 2018-01-31 18:04 GMT

ತುಮಕೂರು,ಜ.31:ದೇಶದ ಜನತೆಗೆ ಸರಳತೆಯ ಬಗ್ಗೆ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ ಸಂಪುಟದಲ್ಲಿರುವ ಸಾರಿಗೆ ಮಂತ್ರಿ ಮಗನ ಮದುವೆಗೂ ಸಾವಿರಾರು ಕೋಟಿ ಖರ್ಚು ಮಾಡಿರುವುದು ಕಣ್ಣಿಗೆ ಬೀಳದಿರುವುದು ವಿಪರ್ಯಾಸ ಎಂದು ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಣ್ಣ ಅಭಿಪ್ರಾಯಪಟ್ಟಿದ್ದಾರೆ.

ನಗರದ ಶ್ರೀಸಿದ್ದಗಂಗಾ ಮಠದಲ್ಲಿ ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ಆಯೋಜಿಸಿದ್ದ ರಾಜ್ಯ ಮಟ್ಟದ ಎರಡನೇ ಸರ್ವೋದಯ ಸಮಾಜ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು,ಇಂದಿನ ರಾಜಕಾರಣಿ ಕೇವಲ ಭಾಷಣ ಪ್ರಿಯರಾಗಿದ್ದಾರೆಯೇ ಹೊರತು,ನುಡಿದಂತೆ ನಡೆಯುವ ಯಾವೊಬ್ಬ ರಾಜಕಾರಣಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಮುಂದಿನ ಎರಡು ವರ್ಷಗಳಲ್ಲಿ ರೈತರ ಅದಾಯವನ್ನು ದ್ವಿಗುಣಗೊಳಿಸುವ ಮಾತನಾಡುತ್ತಿದ್ದಾರೆ. ಇದು ಕಷ್ಟದ ಕೆಲಸವಲ್ಲ.ಆದರೆ ಇಂದು ಹಳ್ಳಿಗಳಲ್ಲಿ ದುಡಿವ ಜನರೇ ಇಲ್ಲ.ಇದ್ದ ಗುಡಿ ಕೈಗಾರಿಕೆಗಳ ಮುಚ್ಚಿ,ಯುವಕರು ಪಟ್ಟಣ ಸೇರುತ್ತಿದ್ದಾರೆ.ಗಾಂಧೀಜಿ ರೈತರ ನಂತರ ನೂಲುವವರು ಮತ್ತು ನೇಕಾರರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಈ ಎರಡು ವೃತ್ತಿಗಳು ಇಂದು ಮೂಲೆ ಸೇರಿವೆ.ಮೀಲ್ ಬಟ್ಟೆಗಳನ್ನೆ ಖಾದಿ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.ಇದರ ವಿರುದ್ದ ಹೋರಾಟಗಳು ನಡೆಯಬೇಕಾಗಿದೆ ಎಂದು ಪಾಟೀಲ್ ಪುಟ್ಟಪ್ಪ ತಿಳಿಸಿದರು.

ಎರಡು ದಿನಗಳ ಕಾಲ ನಡೆದ ಸರ್ವೋದಯ ಸಮಾಜ ಸಮ್ಮೇಳನದಲ್ಲಿ ಸಂಪೂರ್ಣ ಪಾನ ನಿಷೇಧಕ್ಕೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ.ಕರ್ನಾಟಕವನ್ನು ಆಳಿದ ಸರಕಾರಗಳ ಮೇಲೆ ಈ ನಿಟ್ಟಿನಲ್ಲಿ ಒತ್ತಡ ಹೆಚ್ಚಬೇಕಾಗಿದೆ ಎಂದ ಅವರು,ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಗೆ ತಂದದ್ದು ಟಿಪ್ಪು ಸುಲ್ತಾನ್, ಸೇಲಂ, ಕೊಯಮುತ್ತೂರಿನಿಂದ ಗೋವಾದವರೆಗೆ ಹರಡಿದ್ದ ವಿಶಾಲ ಕರ್ನಾಟಕದಲ್ಲಿ ಸಂಪೂರ್ಣ ಪಾನ ನಿಷೇಧವಿತ್ತು. ಅಲ್ಲದೆ ಕೆಲವರು ಹೇಳುವಂತೆ ಹಿಂದುಗಳನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಎಂಬುದು ಸಹ ಸುಳ್ಳು. ಇದು ನಿಜವೇ ಆದರೆ ಅವರ ಅಸ್ಥಾನದಲ್ಲಿ ಮಂತ್ರಿಯಾಗಿದ್ದ ದಿವಾನ್ ಪ್ರರ್ಣಯ್ಯ ಏಕೆ ಮತಾಂತರವಾಗಲಿಲ್ಲ. ಟಿಪ್ಪು ಸುಲ್ತಾನ್ ಆಳ್ವಿಕೆ ಒಳಪಟ್ಟ ಉತ್ತರ ಕರ್ನಾಟಕದ ಜನತೆ ಏಕೆ ಮುಸ್ಲಿಮರಾಗಿ ಬದಲಾಗಲಿಲ್ಲ ಎಂದು ಪ್ರಶ್ನಿಸಿದರು.

1799ರಲ್ಲಿ ನಡೆದ 4ನೇ ಅಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪು ಸುಲ್ತಾನ್ ಸೋಲದೆ ಇದ್ದಿದ್ದರೆ, ಇಂದು ಮಹಾದಾಯಿ ನೀರಿಗಾಗಿ ನಾವು ಬೇಡುವ ಅಗತ್ಯ ಬರುತ್ತಿರಲಿಲ್ಲ. ಕರ್ನಾಟಕ ರೇಷ್ಮೆಯ ನಾಡಾಗಿ ಪರಿವರ್ತನೆಯಾಗುತ್ತಿತ್ತು. ಟಿಪ್ಪು ಸುಲ್ತಾನ್ ಹಿಂದೂ ವಿರೋಧಿಯಾಗಿದ್ದರೆ, ಅವರ ಅರಮನೆಯ ಪಕ್ಕದಲ್ಲಿಯೇ ಶ್ರೀರಂಗನಾಥ ದೇವಾಲಯ ನೆಲೆಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದರ ಬಗ್ಗೆ ತಿಳುವಳಿಕೆಯಿಲ್ಲದೆ ಕೆಲವರು ಟೀಕಿಸುತ್ತಿರುವುದು ಸರಿಯಲ್ಲ. ಯೋಗ್ಯತೆ ಇರುವವನಿಗೆ ಮಾತ್ರ ಮೆಚ್ಚುಗೆ ವ್ಯಕ್ತಪಡಿಸಲು ಸಾಧ್ಯ. ಇಲ್ಲಸಲ್ಲದ ವಿಷಯಗಳಿಗೆ ತೆಲೆಕೆಡಿಸಿಕೊಳ್ಳುವ ಬದಲು, ಸೌಹಾರ್ದ ಸಮಾಜ ಕಟ್ಟುವ ಕೆಲಸ ಸರ್ವೋದಯ ಅನುಯಾಯಿಗಳಿಂದ ನಡೆಯಬೇಕು ಎಂದು ಪಾಟೀಲ್ ಪುಟ್ಟಪ್ಪ ತಿಳಿಸಿದರು.

ಸರ್ವೋದಯ ಸಮಾಜ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷ ವೋಡೆ.ಪಿ.ಕೃಷ್ಣ, ಸರಕಾರ ವಿವಿಧ ಭಾಗ್ಯಗಳ ಮೂಲಕ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ.ಇದು ಗಾಂಧಿಜೀ ಅವರ ಶ್ರಮ ಸಂಸ್ಕೃತಿಯ ತತ್ವಕ್ಕೆ ವಿರುದ್ದವಾಗಿದೆ.ಎಲ್ಲರೂ ದುಡಿದು ತಿನ್ನಬೇಕೆಂಬುದು ಗಾಂಧೀಜಿ ಅವರ ತತ್ವವಾಗಿತ್ತು. ಸಂಸದೀಯ ಕೆಲಸಗಳಿಗಿಂತ ರಚನಾತ್ಮಕ ಕೆಲಸಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದ ಗಾಂಧಿ, ಜನರ ನಡುವೆ ಇದ್ದ ಸಮುದಾಯವನ್ನು ಕಟ್ಟಬೇಕೆಂದು ಬಲವಾಗಿ ನಂಬಿದ್ದರು. ಭಾರತೀಯರು ಬ್ರಿಟಿಷ್ ರಿಂದ ರಾಜಕೀಯ ಸ್ವಾತಂತ್ರವನ್ನೇ ಪಡೆದಿದ್ದು, ಸಾಮಾಜಿಕ, ಅರ್ಥಿಕ ಮತ್ತು ನೈತಿಕ ಸ್ವಾತಂತ್ರ ಲಭ್ಯವಾಗಬೇಕು ಎಂಬುದು ಗಾಂಧೀಜಿ ಪರಿಕಲ್ಪನೆಯಾಗಿತ್ತು. ಅವರ ಕನಸಿನ ಸ್ವಾತಂತ್ರವನ್ನು ಪಡೆಯಲು ನಾವೆಲ್ಲರೂ ಪ್ರಯತ್ನಿಸಬೇಕೆಂದರು.

ಹಿರಿಯ ಸ್ವಾತಂತ್ರ ಹೋರಾಟಗಾರರಾದ ಹೆಚ್.ಎಸ್.ದೊರೆಸ್ವಾಮಿ ಮಾತನಾಡಿ,ಸರ್ವೋದಯ ಮನುಷ್ಯನ ಜೀವನ ಪರಿವರ್ತಿಸಬಲ್ಲ ಒಂದು ಪರಿಕಲ್ಪನೆ. ಸಮಾಜಕೋಸ್ಕರ ಬದುಕಬೇಕು ಎಂಬ ಮನೋಭಾವವನ್ನು ಮೂಡಿಸುತ್ತದೆ.ನಮ್ಮ ಕೈಯಲ್ಲಿ ಶಕ್ತಿ ಇರುವಷ್ಟು ದಿನ ಸಮಾಜಕ್ಕಾಗಿ ದುಡಿಯೋಣ ಎಂದರು. 

ಸರ್ವೋದಯ ಸಮಾಜದ ಜಿಲ್ಲಾಧ್ಯಕ್ಷ ಎಂ.ಬಸವಯ್ಯ ಮಾತನಾಡಿ,ಸರಕಾರದ ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿ ಪರಿವರ್ತಿಸುವುದಲ್ಲದೆ, ಜಾತಿ, ಧರ್ಮದ ಅಮಲಿನಲ್ಲಿ ತೇಲುವಂತೆ ಮಾಡಿದೆ. ಇದರ ಜೊತೆಗೆ ಮಧ್ಯದ ಅಮಲು ಸಹ ಯುವಜನರು ದಾರಿ ತಪ್ಪುತ್ತಿದ್ದಾರೆ. ಗಾಂಧಿಜೀ ಅವರ ಪಾನಮುಕ್ತ ಸಮಾಜದ ಕನಸು ಕಾಣುತ್ತಿರುವ ಧರ್ಮಸ್ಥಳದ ಶ್ರೀವೀರೇಂದ್ರ ಹೆಗಡೆ ಅವರನ್ನು ಮಾದರಿಯಾಗಿಟ್ಟುಕೊಂಡು ಸಂಪೂರ್ಣ ಪಾನ ನಿಷೇಧಕ್ಕೆ ನಾವೆಲ್ಲರೂ ಪಣ ತೊಡಬೇಕಾಗಿದೆ. ಸರಕಾರ ಜನರಿಗೆ ವಿವಿಧ ಭಾಗ್ಯ ನೀಡುವ ಬದಲು, ಸಂಪೂರ್ಣ ಪಾನ ನಿಷೇಧ ಜಾರಿಗೆ ತಂದರೆ ಅದಕ್ಕಿಂತ ದೊಡ್ಡ ಭಾಗ್ಯ ಬೇರೊಂದಿಲ್ಲ ಎಂದರು.

ವೇದಿಕೆಯಲ್ಲಿ ಪತ್ರಿಕೋದ್ಯಮಿ ಎಸ್.ನಾಗಣ್ಣ, ಸರ್ವೋದಯ ಸಮಾಜದ ರಾಜ್ಯಾಧ್ಯಕ್ಷರಾದ ಎಲ್.ನರಸಿಂಹಯ್ಯ,ರಾಜ್ಯ ಕಾರ್ಯದರ್ಶಿ ಡಾ.ಎಚ್.ಎಸ್.ಸುರೇಶ್,ಜಿಲ್ಲಾ ಕಾರ್ಯದರ್ಶಿ ಆರ್.ವಿ.ಪುಟ್ಟಕಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News