ಕೋಳಿ ಹಿಂಸೆ ತಡೆಗೂ ಕಾನೂನು ?

Update: 2018-02-01 03:59 GMT

ಹೊಸದಿಲ್ಲಿ, ಫೆ. 1: ಮೊಟ್ಟೆ ಇಡುವ ಕೋಳಿ ಹಾಗೂ ಬ್ರಾಯ್ಲರ್ ಚಿಕನ್ ಮೇಲಿನ ಕ್ರೌರ್ಯ ತಡೆಯುವ ನಿಟ್ಟಿನಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಅನ್ವಯ ನಿಯಮಾವಳಿಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈ ಸಂಬಂಧ ಕಾನೂನು ಆಯೋಗ ಮಾಡಿದ ಶಿಫಾರಸ್ಸನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಭಾರತದ ಕೋಳಿ ಸಾಕಾಣಿಕೆ ಕೇಂದ್ರಗಳ ಅನೈರ್ಮಲ್ಯದ ಸ್ಥಿತಿ ಬಗ್ಗೆ ಜಾಗತಿಕ ಮಟ್ಟದಲ್ಲಿ ಇರುವ ಕಳಕಳಿಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ಕಾನೂನು ಆಯೋಗ ಕಳೆದ ವರ್ಷ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ, "ಮನುಷ್ಯನ ಆರೋಗ್ಯಕ್ಕೆ ಹಾನಿಯಾಗುವ ರೀತಿಯಲ್ಲಿ ಗೂಡುಗಳಲ್ಲಿ ಕೋಳಿ ಹಾಗೂ ಮೊಟ್ಟೆಗಳನ್ನು ಇಡಲಾಗುತ್ತದೆ. ಆದ್ದರಿಂದ ಕೋಳಿ ಸಾಕಾಣಿಕೆ ಕೇಂದ್ರಗಳ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಒತ್ತು ನೀಡಬೇಕು" ಎಂದು ಸಲಹೆ ಮಾಡಿತ್ತು.

ಪೌಲ್ಟ್ರಿ ಫಾರಂ ಪ್ರಮಾಣೀಕರಣಕ್ಕೆ ಆಯೋಗ ಶಿಫಾರಸ್ಸು ಮಾಡಿದ್ದು, ಪಶು ಸಂಗೋಪನಾ ಇಲಾಖೆಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲ ರಾಜ್ಯಗಳು ಬ್ರಾಯ್ಲರ್ ಚಿಕನ್ ಮತ್ತು ಮೊಟ್ಟೆ ಇಡುವ ಕೋಳಿಗಳ ಸಾಕಾಣಿಗೆಗೆ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಸೂಚಿಸಲಾಗಿತ್ತು.

ಮೊಟ್ಟೆ ಇಡುವ ಕೋಳಿಗಳನ್ನು ಗೂಡಿನ ಬದಲು ಮುಕ್ತ ಪ್ರದೇಶದಲ್ಲಿ ಬೆಳೆಸಬೇಕು ಎಂದು ಸಲಹೆ ನೀಡಿತ್ತು. ಕಾನೂನು ಆಯೋಗದ ಜತೆಗೆ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಕೂಡಾ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿತ್ತು.

ಭಾರತ ವಿಶ್ವದಲ್ಲೇ ಐದನೇ ಅತಿಹೆಚ್ಚು ಮೊಟ್ಟೆ ಉತ್ಪಾದಕ ರಾಷ್ಟ್ರವಾಗಿದ್ದು, ಬ್ರಾಯ್ಲರ್ ಉತ್ಪಾದನೆಯಲ್ಲಿ 18ನೇ ಸ್ಥಾನದಲ್ಲಿದೆ. ಶೇಕಡ 8 ರಿಂದ 10ರ ದರದಲ್ಲಿ ಕುಕ್ಕುಟೋದ್ಯಮ ದೇಶದಲ್ಲಿ ಬೆಳೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News