ಏಕ ಭಾಷೆ, ಧರ್ಮ, ಸಂಸ್ಕೃತಿಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2018-02-01 12:20 GMT

ತುಮಕೂರು,ಫೆ.01: ಏಕ ಭಾಷೆ, ಸಂಸ್ಕೃತಿ, ಧರ್ಮದ ಹೆಸರಿನಲ್ಲಿ ಭಾರತದ ಬಹುತ್ವಕ್ಕೆ ಕೊಡಲಿಯೇಟು ಬೀಳುತ್ತಿದ್ದು, ನಮ್ಮ ಮಕ್ಕಳು ಉದ್ಯೋಗ ವಂಚಿತರಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದರ ವಿರುದ್ದ ನಮ್ಮ ಜನರು, ರಾಜಕಾರಣಿಗಳು ಇಚ್ಚಾಶಕ್ತಿ ಪ್ರದರ್ಶಿಸಬೇಕಾಗಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹಾಗೂ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ಅಮಾನಿಕೆರೆಯಲ್ಲಿ ನಿರ್ಮಿಸಿರುವ ಗಾಜಿನಮನೆಯಲ್ಲಿ ಆಯೋಜಿಸಿದ್ದ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡುತ್ತಿದ್ದ ಅವರು, ಏಕ ಭಾಷೆ, ಸಂಸ್ಕೃತಿ, ಧರ್ಮದ ಫಲವಾಗಿ 2015 ಮತ್ತು 2017ರಲ್ಲಿ 16 ಸಾವಿರ ಹುದ್ದೆಗಳಿಗೆ ನಡೆದ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಕನ್ನಡಿಗರ ಸಂಖ್ಯೆಗೆ ಕೇವಲ 820 ಜನ ಮಾತ್ರ. ಈ ತಾರತಮ್ಯದ ವಿರುದ್ದ ಸಂಸತ್ತಿನಲ್ಲಿ ದ್ವನಿ ಎತ್ತುವಂತೆ ನಾಲ್ಕು ಬಾರಿ ರಾಜ್ಯದ ಎಲ್ಲಾ ಸಂಸದರಿಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರ ಪತ್ರಬರೆದರೂ, ಕೆಲವೇ ಮಂದಿ ಮಾತ್ರ ಸ್ಪಂದಿಸಿದ್ದಾರೆ. ಬೇರೆ ದ್ರಾವಿಡ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕನ್ನಡಿಗರ ಇಚ್ಚಾಶಕ್ತಿ ತೀರಾ ದುರ್ಬಲ. ಸಂವಿಧಾನದದಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲಾ 22 ಭಾಷೆಗಳು ರಾಷ್ಟ್ರಭಾಷೆಗಳೇ ಆಗಿವೆ. ಇವುಗಳ ನಡುವೆ ತಾರತಮ್ಯ ಸರಿಯಲ್ಲ. ಜನ ಬಳಕೆಯೇ ಇಲ್ಲದ ಸಂಸ್ಕೃತದ ಕಲಿಕೆಗೆ ಸಾವಿರಾರು ಕೋಟಿ ಖರ್ಚು ಮಾಡುವ ಸರಕಾರ, ಕನ್ನಡ ಸೇರಿದಂತೆ ರಾಜ್ಯ ಭಾಷೆಗಳನ್ನು ಸಂಹರಿಸಲು ಹೊರಟಿರುವುದು ಎಷ್ಟು ಸರಿ ಎಂದು ಹೇಳಿದರು.

ಏಕ ಭಾಷೆ, ಸಂಸ್ಕೃತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಗಳು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿವೆ. ಒಂದು ಗಂಡು, ಹೆಣ್ಣು ಸಹಜವಾಗಿ ಒಂದೆಡೆ ನಿಂತು ಮಾತನಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಎಲ್ಲವನ್ನೂ ಕಾಮದ ದೃಷ್ಟಿಯಿಂದ ನೋಡಲಾಗುತ್ತಿದೆ. ಇದರಿಂದಾಗಿ ನಮ್ಮ ಕನ್ನಡಿಗರು ಪ್ರತಿಪಾದಿಸಿಕೊಂಡು ಬಂದ ಅಣ್ಣ, ತಮ್ಮ ,ಅಕ್ಕ, ತಂಗಿ ಎಂಬ ಸೋದರತ್ವ ಮರೆಯಾಗಿ, ಪರಸ್ವರ ವೈರಿಗಳಂತೆ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ಸೂಚಿಯಲ್ಲಿ ಭಾರತ 32ನೇ ಸ್ಥಾನದಿಂದ 42ಕ್ಕೆ ಕುಸಿದಿದೆ. ಇದಕ್ಕೆ ಪ್ರಮುಖ ಕಾರಣ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ ಎಂದು ಅವರು ನುಡಿದರು.

ಸರಕಾರಗಳು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಜಾರಿಗೆ ತಂದಿರುವ ರೈಟ್‍ಟು ಎಜುಕೇಷನ್(ಆರ್.ಟಿ.ಇ) ನಿಂದಾಗಿ ಕನ್ನಡ ಶಾಲೆಗಳು ತಮ್ಮ ಅಸ್ಥಿತ್ವ ಕಳೆದುಕೊಳ್ಳುವುದರ ಜೊತೆಗೆ, ಬಜೆಟ್‍ನಲ್ಲಿ ಶಿಕ್ಷಣಕ್ಕೆಂದು ಮೀಸಲಿರಿಸಿದ ಹಣವೂ ಸರಕಾರಿ ಶಾಲೆಗಳ ಬದಲಾಗಿ ಖಾಸಗಿ ಶಾಲೆಗಳ ಅಭಿವೃದ್ದಿಗೆ ಖರ್ಚಾಗುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 480 ಕೋಟಿ ರೂಗಳನ್ನು ಇದಕ್ಕಾಗಿ ಖರ್ಚು ಮಾಡಲಾಗಿದೆ. ಮುಂದಿನ ವರ್ಷಗಳಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾದರೆ ಸರಕಾರಿ ಶಾಲೆಗಳ ಅಭಿವೃದ್ದಿಯ ಅನುದಾನ ಉಳಿಯುವುದಾದರೂ ಎಲ್ಲಿ ಎಂದು ಪ್ರಶ್ನಿಸಿದ ಅವರು, ಖಾಸಗಿ ಶಾಲೆಗಳು ಆರ್.ಟಿ.ಇ ಮಕ್ಕಳಿಗೆ ತಮ್ಮ ಸಾಮಾಜಿಕ ಜವಾಬ್ದಾರಿಗಳ ಅಡಿಯಲ್ಲಿ ಶಿಕ್ಷಣ ನೀಡುವಂತೆ ಪ್ರೇರೆಪಿಸಬೇಕು. 2015ರ ಶಿಕ್ಷಣ ನೀತಿಯನ್ನು ಕಡ್ಡಾಯವಾಗಿ ಜಾರಿಗೆ ತರುವ ಕೆಲಸ ಆಗಬೇಕು ಎಂದು ಎಸ್.ಜಿ. ಸಿದ್ದರಾಮಯ್ಯ ಒತ್ತಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ.ರಫೀಕ್ ಅಹಮದ್ ವಹಿಸಿದ್ದರು. ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್‍ಹಾಲ್ ವೃತ್ತದಿಂದ ಸಮ್ಮೇಳನದ ಸಭಾಂಗಣದವರೆಗೂ ಸಮ್ಮೇಳನಾಧ್ಯಕ್ಷರಾದ ಎಸ್.ಜಿ.ಸಿದ್ದರಾಮಯ್ಯ ದಂಪತಿಗಳನ್ನು ತೆರೆದ ಜೀಪಿನಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News