2.5 ಲಕ್ಷ ರೂ.ಗಿಂತ ಹೆಚ್ಚಿನ ವ್ಯವಹಾರಕ್ಕೆ ‘ಪಾನ್‌‘ ಕಡ್ಡಾಯ

Update: 2018-02-01 14:46 GMT

ಹೊಸದಿಲ್ಲಿ, ಫೆ.1: 2.5 ಲಕ್ಷಕ್ಕೂ ಹೆಚ್ಚಿನ ಆರ್ಥಿಕ ವ್ಯವಹಾರಕ್ಕೆ ‘ಪಾನ್‌’ ಸಂಖ್ಯೆ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ. 1ಲಕ್ಷ ರೂ.ಗೂ ಹೆಚ್ಚಿನ ದೀರ್ಘಾವಧಿಯ ಬಂಡವಾಳ ಲಾಭಕ್ಕೆ ಸೂಚೀಕರಣವಿಲ್ಲದೆ ಶೇ.10ರಷ್ಟು ತೆರಿಗೆ ವಿಧಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿದೆ.  ಅಲ್ಲದೆ 10 ಕೋಟಿಗೂ ಹೆಚ್ಚಿನ ಬಡಜನರಿಗೆ ನೆರವಾಗುವ ಸರಕಾರದ ಆರೋಗ್ಯ ಯೋಜನೆ ವಿಶ್ವದ ಅತ್ಯಂತ ಬೃಹತ್ ಆರೋಗ್ಯ ಸುರಕ್ಷಾ ಯೋಜನೆಯಾಗಿದೆ. ಹೆಚ್ಚಿನ ಪಾರದರ್ಶಕತೆ ಹಾಗೂ ದಕ್ಷತೆಯ ನಿಟ್ಟಿನಲ್ಲಿ ದೇಶದಾದ್ಯಂತ ವಿದ್ಯುನ್ಮಾನ ಕ್ರಮದ ಮೂಲಕ ಆದಾಯತೆರಿಗೆ ನಿಗದಿಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಜೇಟ್ಲಿ ತಿಳಿಸಿದ್ದಾರೆ.

► ಮೊಬೈಲ್ ಫೋನ್‌ಗಳ ಮೇಲಿನ ಸೀಮಾಸುಂಕವನ್ನು ಶೇ.20ಕ್ಕೆ ಹೆಚ್ಚಿಸಲಾಗಿದ್ದು, ಇದರಿಂದ ಮೊಬೈಲ್ ಫೋನ್‌ಗಳು ದುಬಾರಿಯಾಗಲಿವೆ.

► ಆರೋಗ್ಯ ಮತ್ತು ಶಿಕ್ಷಣ ಉಪಕರವನ್ನು ಶೇ.4ಕ್ಕೆ ಹೆಚ್ಚಿಸಲಾಗಿದೆ.

► ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿರುವ ಜೇಟ್ಲಿ, ಹಿರಿಯ ನಾಗರಿಕರ ಬ್ಯಾಂಕ್ ಠೇವಣಿಯ ಮೇಲಿನ ಬಡ್ಡಿದರವನ್ನು 50,000 ರೂ.ಗೆ ಹೆಚ್ಚಿಸಿದ್ದಾರೆ.

► 250 ಕೋಟಿ ರೂ.ನಷ್ಟು ವಹಿವಾಟು ನಡೆಸುವ ಸಂಸ್ಥೆಗಳ ಮೇಲೆ ಶೇ.25ರಷ್ಟು ತೆರಿಗೆ ವಿಧಿಸಲಾಗುವುದು . ಆದರೆ ವೇತನವರ್ಗದವರಿಗೆ ನಿಗದಿಯಾಗಿರುವ ತೆರಿಗೆ ಶ್ರೇಣಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ವಿತ್ತಸಚಿವರು ತಿಳಿಸಿದ್ದಾರೆ.

► 2018-19ರಲ್ಲಿ ಜಿಡಿಪಿಯ ಶೇ.3.3ರಷ್ಟು ವಿತ್ತೀಯ ಕೊರತೆಯನ್ನು ಪ್ರಸ್ತಾಪಿಸಿರುವ ಜೇಟ್ಲಿ, ಬಂಡವಾಳ ಹಿಂದೆಗೆತ ಗುರಿಯನ್ನು ಸರಕಾರ ತಲುಪಿದೆ . 2018-19ಕ್ಕೆ 80,000 ಕೋಟಿ ರೂ. ನಮ್ಮ ಗುರಿಯಾಗಿದೆ ಎಂದಿದ್ದಾರೆ.

► ರಾಷ್ಟ್ರಪತಿಯವರಿಗೆ 5 ಲಕ್ಷ ರೂ. ವೇತನ, ಉಪರಾಷ್ಟ್ರಪತಿಗೆ 4 ಲಕ್ಷ ರೂ, ರಾಜ್ಯಪಾಲರಿಗೆ 3.5 ಲಕ್ಷ ರೂ. ಸಂಬಳ ನಿಗದಿಪಡಿಸುವುದಾಗಿ ಪ್ರಸ್ತಾಪಿಸಲಾಗಿದೆ. ಸಂಸದರಿಗೆ ಪ್ರತೀ ಐದು ವರ್ಷಕ್ಕೊಮ್ಮೆ ಸಂಬಳದ ಪರಿಷ್ಕರಣೆಯನ್ನೂ ಪ್ರಸ್ತಾಪಿಸಲಾಗಿದೆ.

► ಗ್ರಾಮೀಣ ಪ್ರದೇಶಗಳಲ್ಲಿ ವೈಫೈ ಸೌಲಭ್ಯ ಸಹಿತವಾದ 5 ಲಕ್ಷ ಆಸ್ಪತ್ರೆಗಳನ್ನು ಸ್ಥಾಪಿಸುವ ಮೂಲಕ ಅಂತರ್‌ಜಾಲ ಬಳಕೆಯನ್ನು ಸುಲಭವಾಗಿ ಲಭ್ಯಗೊಳಿಸಲಾಗುವುದು.

► ಅಕ್ರಮ ವ್ಯವಹಾರದಲ್ಲಿ ಬಳಸಲಾಗುವ ಕ್ರಿಪ್ಟೊ ಕರೆನ್ಸಿಯನ್ನು ನಿವಾರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು.

► 500 ನಗರಗಳ ಎಲ್ಲಾ ಮನೆಗಳಿಗೆ ನೀರು ಪೂರೈಕೆ ಮಾಡುವ ‘ಅಮೃತ’ ಯೋಜನೆ ಆರಂಭ.

► ರಾಷ್ಟ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಕಂಪ್ಯೂಟರ್ ವಿಜ್ಞಾನದಂತಹ ವಿಷಯಗಳ ಶಿಕ್ಷಣಕ್ಕೆ ಒತ್ತು ನೀಡುವ ಸರಕಾರದ ಪ್ರಯತ್ನಕ್ಕೆ ಪೂರಕವಾಗಿ ನೀತಿ ಆಯೋಗವು ರಾಷ್ಟ್ರೀಯ ಕಾರ್ಯಕ್ರಮವೊಂದನ್ನು ಆರಂಭಿಸಲಿದೆ.

► ವರ್ಷವೊಂದಕ್ಕೆ 1 ಬಿಲಿಯನ್ ಯಾನ ನಿರ್ವಹಿಸುವ ಮಟ್ಟಕ್ಕೆ ವಿಮಾನನಿಲ್ದಾಣಗಳ ಸಾಮರ್ಥ್ಯವನ್ನು ಏರಿಸಲಾಗುವುದು.

► 2019ರ ವೇಳೆಗೆ 4,000 ಕಿ.ಮೀ.ನಷ್ಟು ನೂತನ ರೈಲ್ವೇ ಹಳಿಗಳ ಅಳವಡಿಕೆ.

► 25,000ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುವ ರೈಲ್ವೇ ನಿಲ್ದಾಣಕ್ಕೆ ‘ಎಸ್ಕಲೇಟರ್’ಗಳ ವ್ಯವಸ್ಥೆ. ಮುಂಬೈಗೆ ( ರೈಲ್ವೇ ಸೇವೆ) 40,000 ಕೋಟಿ ರೂ.ಅನುದಾನ

► ದೇಶದಾದ್ಯಂತ 600 ಪ್ರಮುಖ ರೈಲ್ವೇ ನಿಲ್ದಾಣಗಳ ಮರುನಿರ್ಮಾಣ ಕಾರ್ಯ.

► 2018-19ರಲ್ಲಿ ಭಾರತೀಯ ರೈಲ್ವೇಯ ಬಂಡವಾಳ ವೆಚ್ಚ 1,48,528 ಕೋಟಿ ರೂ. ನಿಗದಿ.

► ರಾಷ್ಟ್ರೀಯ ಪಾರಂಪರಿಕ ನಗರ ಅಭಿವೃದ್ಧಿ ಹೆಚ್ಚಳ ಕಾರ್ಯಕ್ರಮದಡಿ ದೇಶದಾದ್ಯಂತದ ಪಾರಂಪರಿಕ ನಗರಗಳ ಸುರಕ್ಷತೆ ಹಾಗೂ ರಕ್ಷಣೆಗೆ ಯೋಜನೆ.

► ಎಲ್ಲಾ ಕ್ಷೇತ್ರಗಳಲ್ಲೂ ನೂತನ ಉದ್ಯೋಗಿಗಳಿಗೆ ಪ್ರಾವಿಡೆಂಟ್ ಫಂಡ್ (ಇಪಿಎಫ್)ನ ಶೇ.12ರಷ್ಟನ್ನು ಸರಕಾರ ಪಾವತಿಸಲಿದೆ.

► ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 3 ಲಕ್ಷ ಕೋಟಿ ರೂ. ಸಾಲ ನೀಡುವ ಗುರಿ.

► ಎಂಎಸ್‌ಎಂಇ(ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ) ಉದ್ದಿಮೆಗಳು ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದು ಹೇಳಿರುವ ಜೇಟ್ಲಿ, ಜಿಎಸ್‌ಟಿ ಜಾರಿ ಹಾಗೂ ನೋಟು ಅಮಾನ್ಯೀಕರಣ ಪ್ರಕ್ರಿಯೆಯ ಬಳಿಕ ಎಂಎಸ್‌ಎಂಇ ಕ್ಷೇತ್ರದ ಸಾಮೂಹಿಕ ರೂಪೀಕರಣ ಸಾಧ್ಯವಾಗಿದೆ ಎಂದಿದ್ದಾರೆ.

► ಜನ್‌ಧನ ಯೋಜನೆಯಡಿ 60 ಕೋಟಿ ಬ್ಯಾಂಕ್ ಖಾತೆಗಳನ್ನು ಆರಂಭಿಸುವ ಗುರಿ.

► ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳ ನೆರವಿಗಾಗಿ 600 ಕೋಟಿ ರೂ. ನಿಗದಿ.

► ಪ್ರತಿಭಾ ಪಲಾಯನ ತಡೆಗೆ ಯೋಜನೆ. ಪ್ರಮುಖ ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಬಿ.ಟೆಕ್ ಶಿಕ್ಷಣ ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಐಐಟಿ, ಐಐಎಸ್‌ಸಿಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ನೆರವಾಗುವುದು. ಈ ವಿದ್ಯಾರ್ಥಿಗಳಿಗೆ ಆಕರ್ಷಕ ಫೆಲೋಶಿಪ್ ನೀಡುವ ಜೊತೆಗೆ, ಪ್ರತೀ ವಾರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲವು ಗಂಟೆ ಉಪನ್ಯಾಸ ನೀಡಲು ಅವಕಾಶ ನೀಡುವುದು.

► ವಡೋದರದಲ್ಲಿ ವಿಶಿಷ್ಟ ರೈಲ್ವೇ ವಿವಿ ಸ್ಥಾಪನೆ.

► ಶಿಕ್ಷಕರಿಗೆ ಸಮಗ್ರ ಬಿಎಡ್ ಶಿಕ್ಷಣ ಯೋಜನೆ. ಕಾರ್ಯನಿರ್ವಹಿಸುವ ಶಿಕ್ಷಕರಿಗೆ ತರಬೇತಿ ನೀಡುವುದು ಅತ್ಯಗತ್ಯವಾಗಿದೆ. ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಆದ್ಯತೆ.

► ವಿಧವೆಯರಿಗೆ ಹಾಗೂ ಅನಾಥಾಲಯದ ಮಕ್ಕಳಿಗೆ ಸಾಮಾಜಿಕ ಭದ್ರತೆ ಹಾಗೂ ಸುರಕ್ಷಾ ಯೋಜನೆಯಡಿ ಬಜೆಟ್‌ನಲ್ಲಿ ಅನುದಾನ ನಿಗದಿ.

► 2022ರ ವೇಳೆಗೆ ಎಲ್ಲಾ ಭಾರತೀಯರಿಗೆ ವಸತಿ ಸೌಲಭ್ಯ ಒದಗಿಸುವ ಗುರಿ.

► ಗ್ರಾಮೀಣ ಮಹಿಳೆಯರಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ನೀಡುವ ‘ಉಜ್ವಲ ’ ಯೋಜನೆಯ ಗುರಿಯನ್ನು 8 ಕೋಟಿಗೆ ವಿಸ್ತರಿಸಲಾಗಿದೆ.

► ಪಂಜಾಬ್, ಹರ್ಯಾಣ, ಉತ್ತರಪ್ರದೇಶ ಹಾಗೂ ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಬೆಳೆ ತ್ಯಾಜ್ಯಗಳನ್ನು ಪರಿಸರಕ್ಕೆ ಹಾನಿಯಿಲ್ಲದಂತೆ ನಿರ್ವಹಿಸುವ ಯಂತ್ರಗಳ ನ್ನು ಸಬ್ಸಿಡಿ ಮೂಲಕ ಪೂರೈಕೆಗೆ ನಿರ್ಧಾರ.

► ರೈತರು ಉತ್ಪಾದಿಸಿದ ಸೌರಶಕ್ತಿಯನ್ನು ಯೋಗ್ಯ ದರದಲ್ಲಿ ಸ್ಥಳೀಯವಾಗಿ ಖರೀದಿಸಲು ವ್ಯವಸ್ಥೆ.

► ‘ಆಪರೇಷನ್ ಫ್ಲಡ್’ (ನೆರೆ ಪರಿಹಾರ ಕಾರ್ಯಾಚರಣೆ) ರೀತಿಯಲ್ಲಿ ‘ಹಸಿರು ಕ್ರಾಂತಿ ಕಾರ್ಯಾಚರಣೆ’ಗೆ ಪ್ರಸ್ತಾಪ.

► ಮಾರುಕಟ್ಟೆ ದರಕ್ಕಿಂತ 1.5 ಪಟ್ಟು ಹೆಚ್ಚಿನ ದರದಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News