ಉದ್ಯಮಿಗಳು ಮತ್ತು ಉದ್ಯೋಗಿಗಳು ಪಾವತಿಸಿದ ತೆರಿಗೆಯ ವ್ಯತ್ಯಾಸವೆಷ್ಟು ಗೊತ್ತೇ?

Update: 2018-02-01 16:01 GMT

ಹೊಸದಿಲ್ಲಿ,ಫೆ.1: ಗುರುವಾರ ಸಂಸತ್ತಿನಲ್ಲಿ ಮಂಡಿಸಿದ ಮುಂಗಡಪತ್ರದಲ್ಲಿ ವಿತ್ತಸಚಿವ ಅರುಣ್ ಜೇಟ್ಲಿಯವರು ಆದಾಯ ತೆರಿಗೆಯಲ್ಲಿ ಅಥವಾ ಆದಾಯ ಸ್ತರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ, ಆದರೆ ಪ್ರಯಾಣ ಭತ್ಯೆ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿಯ ಮೇಲೆ 40,000 ರೂ.ಗಳ ಸ್ಟಾಂಡರ್ಡ್ ಡಿಡಕ್ಷನ್ ಅಥವಾ ಪ್ರಮಾಣಿತ ಕಡಿತವನ್ನು ಪ್ರಕಟಿಸುವ ಮೂಲಕ ವೇತನದಾರ ವರ್ಗಕ್ಕೆ ಕೊಂಚ ಹಿತಾನುಭವ ನೀಡಿದ್ದಾರೆ. ಈ ಕೊಡುಗೆಯಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 8,000 ಕೋ.ರೂ.ಗಳ ಆದಾಯ ನಷ್ಟವಾಗಲಿದೆ.

ವೇತನದಾರ ವರ್ಗಕ್ಕೆ ನೀಡಲಾಗುವ ಪ್ರಮಾಣಿತ ಕಡಿತವನ್ನು 2006-07ನೇ ಸಾಲಿನಿಂದ ಸ್ಥಗಿತಗೊಳಿಸಲಾಗಿತ್ತು.

ಆದರೆ ಜೇಟ್ಲಿಯವರ ಈ ಕೊಡುಗೆ ವೇತನದಾರ ವರ್ಗಕ್ಕೆ ಹೆಚ್ಚಿನ ಲಾಭವನ್ನೇನೂ ನೀಡುವುದಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ವೆಚ್ಚ ಮರುಪಾವತಿಗೆ ಹಾಲಿ ತೆರಿಗೆ ವಿನಾಯಿತಿ ಮಿತಿ ವಾರ್ಷಿಕ 15,000 ರೂ.ಇದೆ ಮತ್ತು ಪ್ರಯಾಣ ಭತ್ಯೆ ವಿನಾಯಿತಿ ಮಾಸಿಕ 1,600 ರೂ.ಇದೆ. ಒದರಿಂದಾಗಿ ಹೇಗಿದ್ದರೂ ಒಟ್ಟಾರೆಯಾಗಿ ತೆರಿಗೆಮುಕ್ತ ವೇತನದ ಮೊತ್ತ ವಾರ್ಷಿಕ 34,200 ರೂ.ಗಳಾಗಿರುವುದರಿಂದ ವಾರ್ಷಿಕ 40,000 ರೂ.ಗಳ ಸ್ಟಾಂಡರ್ಡ್ ಡಿಡಕ್ಷನ್‌ನಿಂದ ನಾಮಮಾತ್ರ ಲಾಭ ದೊರೆಯುತ್ತದೆಯಷ್ಟೇ ಎಂದು ಡೆಲಾಯಿಟ್ ಇಂಡಿಯಾದ ಹಿರಿಯ ನಿರ್ದೇಶಕ ಅಲೋಕ ಅಗರವಾಲ್ ಹೇಳಿದರು.

ಉದ್ಯಮಿಗಳು ಮತ್ತು ಉದ್ಯೋಗಿಗಳು ಪಾವತಿಸಿದ ತೆರಿಗೆಯ ವ್ಯತ್ಯಾಸ

 2016-17ನೇ ಸಾಲಿಗೆ 1.89 ಕೋಟಿ ವೇತನದಾರರು ತಮ್ಮ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಿದ್ದು, ಒಟ್ಟು 1.44 ಲ.ಕೋ.ರೂ.ತೆರಿಗೆಯನ್ನು ಪಾವತಿಸಿದ್ದಾರೆ. ಅಂದರೆ ಸರಾಸರಿ ಓರ್ವ ತೆರಿಗೆದಾರ 76,306 ರೂ.ತೆರಿಗೆಯನ್ನು ಪಾವತಿಸಿದ್ದಾನೆ. ಇದೇ ಅವಧಿಯಲ್ಲಿ ವ್ಯಕ್ತಿಗತ ಆದಾಯ ಹೊಂದಿರುವ 1.88 ಕೋ.ಉದ್ಯಮಿಗಳು ಒಟ್ಟು 48,000 ಕೋ.ರೂ. ತೆರಿಗೆಯನ್ನು ಪಾವತಿಸಿದ್ದಾರೆ. ಅಂದರೆ ಈ ವರ್ಗದ ಓರ್ವ ವ್ಯಕ್ತಿ ಸರಾಸರಿ 25,753 ಕೋ.ರೂ.ತೆರಿಗೆಯನ್ನು ಪಾವತಿಸಿದ್ದಾನೆ.

 ಮುಂಗಡಪತ್ರ ಕೊಡುಗೆಯಿಂದ ಒಟ್ಟು 2.5 ಕೋಟಿ ನೌಕರರು ಮತ್ತು ಪಿಂಚಣಿ ದಾರರಿಗೆ ಲಾಭವಾಗಲಿದೆ.

ಹಿರಿಯ ನಾಗರಿಕರಿಗೆ ಬಡ್ಡಿಯಿಂದ ಆದಾಯದ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ ವಾರ್ಷಿಕ 10,000 ರೂ.ಗಳಿಂದ 50,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದೇ ವೇಳೆ ಆದಾಯ ತೆರಿಗೆ ಕಾಯ್ದೆಯ ಕಲಂ 80ಡಿ ಅಡಿ ಆರೋಗ್ಯ ವಿಮೆ ಪ್ರೀಮಿಯಂ ಮತ್ತು ವೈದ್ಯಕೀಯ ವೆಚ್ಚದ ಮೇಲಿನ ಕಡಿತ ವಿನಾಯಿತಿಯನ್ನು ಈಗಿನ 30,000 ರೂ.ಗಳಿಂದ 50,000 ರೂ.ಗಳಿಗೆ ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News