ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ: ಜೇಟ್ಲಿ ಭರವಸೆ

Update: 2018-02-01 17:17 GMT

ಹೊಸದಿಲ್ಲಿ, ಫೆ. 1: ಕೃಷಿ ಉತ್ಪನ್ನಗಳ ರಫ್ತು ಹೆಚ್ಚಿಸಲು ಸರಕಾರ ಕ್ರಮಗಳನ್ನು ತೆಗೆದುಕೊಳ್ಳಲಿದೆ ಹಾಗೂ 100 ಬಿಲಿಯ ಡಾಲರ್ (6.40 ಲಕ್ಷ ಕೋಟಿ ರೂಪಾಯಿ) ರಫ್ತಿಗೆ ಅವಕಾಶವಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಹೇಳಿದ್ದಾರೆ.

ಈಗ ದೇಶದ ರಫ್ತು ಪ್ರಮಾಣ ಕೇವಲ 30 ಬಿಲಿಯ ಡಾಲರ್ (1.92 ಲಕ್ಷ ಕೋಟಿ ರೂಪಾಯಿ) ಆಗಿದೆ.

‘‘ಭಾರತದ ಕೃಷಿ ಉತ್ಪನ್ನಗಳ ರಫ್ತು ಈಗಿನ 1.92 ಲಕ್ಷ ಕೋಟಿ ರೂ.ಯಿಂದ 6.40 ಲಕ್ಷ ಕೋಟಿಗೆ ಏರುವ ಸಾಮರ್ಥ್ಯವನ್ನು ಹೊಂದಿದೆ. ಈ ಸಾಧ್ಯತೆಯನ್ನು ನಿಜವಾಗಿಸಲು ಕೃಷಿ ಉತ್ಪನ್ನಗಳ ರಫ್ತನ್ನು ಉದಾರೀಕರಣಗೊಳಿಸಲಾಗುವುದು’’ ಎಂದು 2018-19ರ ಬಜೆಟ್ ಮಂಡಿಸಿದ ಜೇಟ್ಲಿ ನುಡಿದರು.

ಅದೇ ವೇಳೆ, ದೇಶದ 42 ಬೃಹತ್ ಆಹಾರ ಕೇಂದ್ರಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಯನ್ನು ಒದಗಿಸುವ ಪ್ರಸ್ತಾವವನ್ನೂ ಅವರು ಮಂಡಿಸಿದರು.

ಚಹಾ, ಕಾಫಿ, ಹಣ್ಣುಗಳು ಮತ್ತು ತರಕಾರಿಗಳು ಮುಂತಾದ ಕೃಷಿ ಉತ್ಪನ್ನಗಳ ರಫ್ತನ್ನು ಉತ್ತೇಜಿಸಲು ಮೂಲಸೌಕರ್ಯಗಳನ್ನು ಒದಗಿಸುವ ವಿಚಾರದಲ್ಲಿ ವಾಣಿಜ್ಯ ಸಚಿವಾಲಯ ಸಮಗ್ರ ನೀತಿಯೊಂದನ್ನು ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಹಣಕಾಸು ಸಚಿವರ ಈ ಘೋಷಣೆ ಮಹತ್ವ ಪಡೆದುಕೊಂಡಿದೆ.

ಭಾರತ ಅತಿ ದೊಡ್ಡ ಕೃಷಿ ಉತ್ಪನ್ನಗಳ ಉತ್ಪಾದಕರು ಮತ್ತು ರಫ್ತುದಾರರ ಪೈಕಿ ಒಂದಾಗಿದೆ.

ಪ್ರಮಾಣೀಕರಣ ಮತ್ತು ವಸ್ತುಗಳ ಮೇಲೆ ನಿಗಾ ಇಡುವುದು ಮುಂತಾದ ವಿಷಯಗಳನ್ನು ನೂತನ ನೀತಿಯು ಒಳಗೊಳ್ಳುವುದು ಎನ್ನಲಾಗಿದೆ.

ಅದೇ ವೇಳೆ, ಕೃಷಿ ಉತ್ಪನ್ನಗಳಿಗೆ ಅಧಿಕ ಬೇಡಿಕೆಯಿರುವ ದೇಶಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿಯೂ ವಾಣಿಜ್ಯ ಸಚಿವಾಲಯ ನಿರತವಾಗಿದೆ.

ದೇಶದ ಒಟ್ಟು ರಫ್ತಿನಲ್ಲಿ ಕೃಷಿ ಉತ್ಪನ್ನಗಳ ಪಾಲು 10 ಶೇ.ಕ್ಕಿಂತಲೂ ಅಧಿಕ.

ಭಾರತವು ಚಹಾ, ಕಾಫಿ, ಅಕ್ಕಿ, ದವಸ ಧಾನ್ಯಗಳು, ತಂಬಾಕು, ಸಂಬಾರ ಪದಾರ್ಥಗಳು, ಗೇರುಬೀಜ, ಎಣ್ಣೆಗಳು, ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಸಮುದ್ರೋತ್ಪನ್ನಗಳನ್ನು ಭಾರತ ಪ್ರಮುಖವಾಗಿ ರಫ್ತು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News