ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಇಂಜೆಕ್ಷನ್ ನೀಡುತ್ತಿದ್ದ ಬಾಣಸಿಗ!

Update: 2018-02-01 17:29 GMT

ಲಕ್ನೋ, ಫೆ.1: ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ಬಾಣಸಿಗನೊಬ್ಬ ರೋಗಿಗಳಿಗೆ ಇಂಜೆಕ್ಷನ್ ನೀಡುತ್ತಿರುವ ಘಟನೆ ನಡೆದಿದೆ ಎಂದು news18.com ವರದಿ ಮಾಡಿದೆ.

ಭಾಟ್ನಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಬಾಣಸಿಗ ರಾಮ ಶಂಕರ್ ಎಂಬಾತ ಈ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.  ಕ್ಯಾಮರಾದಲ್ಲಿ ತನ್ನ ಕೃತ್ಯವನ್ನು ಸೆರೆ ಹಿಡಿಯುತ್ತಿದ್ದಂತೆ ಆತ ತಪ್ಪಿಸಿಕೊಂಡಿದ್ದು, ನಂತರ ತಪ್ಪೊಪ್ಪಿಕೊಂಡಿದ್ದಾನೆ ಹಾಗು ಹಲವು ತಿಂಗಳುಗಳಿಂದ ಇದೇ ಕೆಲಸ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ತಮಗೆ ಇಷ್ಟು ದಿನ ಇಂಜೆಕ್ಷನ್ ಚುಚ್ಚುತ್ತಿದ್ದದ್ದು ಓರ್ವ ಬಾಣಸಿಗ ಎಂದು ತಿಳಿದು ರೋಗಿಗಳು ಹೌಹಾರಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಗರ್ಭಿಣಿಯರಿಗೆ ಆಹಾರ ಒದಗಿಸುವ ರಾಜ್ಯ ಸರಕಾರದ ಆದೇಶದ ಪ್ರಕಾರ ಶಂಕರ್ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಆದರೆ ಅಡುಗೆ ಮಾಡುವ ಬದಲು ಹೆಚ್ಚಿನ ಸಮಯವನ್ನು ಆತ ಇಂಜೆಕ್ಷನ್ ನೀಡುವುದರಲ್ಲಿ ಹಾಗು ಡ್ರಿಪ್ ಹಾಕುವುದರಲ್ಲೇ ಕಾಲ ಕಳೆಯುತ್ತಿದ್ದ ಎನ್ನಲಾಗಿದೆ.

ಆದರೆ ವರ್ಷಗಳ ಕಾಲ ರೋಗಿಗಳಿಗೆ ಸರಿಯಾಗಿ ಆಹಾರ ನೀಡುತ್ತಿರಲಿಲ್ಲ ಎನ್ನಲಾಗಿದೆ. “ಊಟವನ್ನು ನಾನೇ ಖರೀದಿಸುತ್ತಿದ್ದೇನೆ. ಆಸ್ಪತ್ರೆಯಿಂದ ಯಾರೊಬ್ಬರೂ ನನಗೆ ಆಹಾರ ನೀಡುತ್ತಿಲ್ಲ” ಎಂದು ಚಿಕಿತ್ಸೆ ಪಡೆಯುತ್ತಿರುವ ಸೋನಿ ಎಂಬವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News