ರೈಲು, ರಸ್ತೆ, ವಾಯು ಯಾನ, ಒಳನಾಡ ಜಲಮಾರ್ಗಕ್ಕೆ 50 ಲಕ್ಷ ಕೋಟಿ ರೂ. ಘೋಷಣೆ

Update: 2018-02-01 17:32 GMT

ಹೊಸದಿಲ್ಲಿ, ಪೆ. 1: ಮೂಲಸೌಕರ್ಯ ಅಭಿವೃದ್ಧಿ ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿ ಎಂದು ವ್ಯಾಖ್ಯಾನಿಸಿರುವ ಅರುಣ್ ಜೇಟ್ಲಿ, ರಸ್ತೆ, ರೈಲು ಹಾಗೂ ಒಳನಾಡು ಜಲಮಾರ್ಗ ಅಭಿವೃದ್ಧಿಗೆ ಹೂಡಿಕೆ ಮಾಡಲು ಭಾರತಕ್ಕೆ 50 ಲಕ್ಷ ಕೋಟಿ ಅಗತ್ಯವಿದೆ ಎಂದಿದ್ದಾರೆ. ಹೆಚ್ಚಿನ ಹಣವನ್ನು ಮಾರುಕಟ್ಟೆಯ ಈಕ್ವಿಟಿಯಿಂದ ಸಂಗ್ರಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮೂಲ ಸೌಕರ್ಯ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಗಮನ ಹರಿಸಿದ ವಿಷಯಗಳಲ್ಲಿ ಒಂದು. 2014-15ರಲ್ಲಿ ಸುಮಾರು 1.18 ಲಕ್ಷ ಕೋಟಿ ಮಂಜೂರಿನೊಂದಿಗೆ ಇದು ಆರಂಭವಾಗಿತ್ತು. 2017-18ರ ಬಜೆಟ್‌ನಲ್ಲಿ ಮೂಲ ಸೌಕರ್ಯದ ಬಜೆಟ್ ಪಾಲು 3.96 ಲಕ್ಷ ಕೋಟಿ ತಲುಪಿತು. ನಾಲ್ಕು ವರ್ಷಗಳಲ್ಲಿ ಸರಿಸುಮಾರು ದ್ವಿಗುಣವಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ. ರಸ್ತೆ ಜಾಲ ಸಬಲಗೊಳಿಸುವ ಮಹತ್ವಾಕಾಂಕ್ಷೆಯ ಭಾರತ್‌ಮಾಲಾ ಯೋಜನೆಗೇ 2017-18ರಲ್ಲಿ ಅನುಮೋದನೆ ನೀಡಲಾಗಿತ್ತು. ಇದಕ್ಕಾಗಿ ಸರಕಾರ ಮಾರುಕಟ್ಟೆಯ ಈಕ್ವಿಟಿಯಿಂದ 5.35 ಲಕ್ಷ ಕೋಟಿ ಸಂಗ್ರಹಿಸಿತ್ತು. ರಸ್ತೆ ಸಚಿವಾಲಯ ಟೋಲ್ ನಿರ್ವಹಣೆ-ವರ್ಗಾವಣೆ ಮಾದರಿಯ ಮೂಲಕ ಹಣ ಸಂಗ್ರಹಿಸಬೇಕು ಎಂದು ಅವರು ಹೇಳಿದರು.

ಸಮುದ್ರ ವಿಮಾನ ಪರಿಚಯಿಸುವ ಯೋಜನೆ ಹಾಗೂ ಪ್ರಯಾಣಿಕ ಸ್ನೇಹಿ ಟೋಲ್ ನೀತಿ ಸೇರಿದಂತೆ ಸರಕಾರದ ನೂತನ ಮೂಲ ಸೌಕರ್ಯಗಳ ನೀಲನಕ್ಷೆಯನ್ನು ಘೋಷಿಸಿದರು. ಟೋಲ್ ಪ್ಲಾಝಾಗಳಲ್ಲಿ ‘ಪ್ರಯಾಣಿಸುವ ಪಾವತಿಸಿ’ ನೀತಿಯಲ್ಲಿ ಸರಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಜೇಟ್ಲಿ ಹೇಳಿದರು. ರೈಲ್ವೆಗೆ 1.48 ಲಕ್ಷ ಕೋಟಿ ಬಂಡವಾಳ ವೆಚ್ಚವನ್ನು ಜೇಟ್ಲಿ ಘೋಷಿಸಿದ್ದಾರೆ. ಪ್ರಯಾಣಿಕರ ಸುರಕ್ಷೆ ಹಾಗೂ ಆಧುನಿಕೀಕರಣ ಸೇರಿದಂತೆ ರೈಲ್ವೆಯ ಮುಂದುವರಿಯುತ್ತಿರುವ ಯೋಜನೆಗಳ ಮೇಲೆ ಜೇಟ್ಲಿ ಗಮನ ಕೇಂದ್ರೀಕರಿಸಿದ್ದಾರೆ. 600 ರೈಲ್ವೆ ಸ್ಟೇಶನ್‌ನಗಳಲ್ಲಿ ವೈಫೈ, ಸಿಸಿಟಿವಿ ಕೆಮರಾ, ಎಸ್ಕಲೇಟರ್ ಸೇರಿದಂತೆ ಆದುನಿಕ ಸೌಲಭ್ಯಗಳನ್ನು ಒದಗಿಸುವ ಮರು ಅಭಿವೃದ್ಧಿಯ ಕಾಮಗಾರಿಯನ್ನು ಸರಕಾರ ಮುಂದುವರಿಸಲಿದೆ ಎಂದು ಅವರು ಹೇಳಿದರು.

ತಂತ್ರಜ್ಞಾನದ ಬಳಕೆಯ ಹೆಚ್ಟಳ, ಹಳಿಗಳ ನಿರ್ವಹಣೆ, ಸುರಕ್ಷೆಯ ಮೇಲೆ ಗಮನ ಕೇಂದ್ರೀಕರಿಸುವುದನ್ನು ರೈಲ್ವೆ ಮುಂದುವರಿಸಲಿದೆ ಎಂದು ಜೇಟ್ಲಿ ಹೇಳಿದ್ದಾರೆ. 700 ರೈಲು ಎಂಜಿನ್, 5,160 ಕೋಚ್‌ಗಳು, 12,000 ವ್ಯಾಗನ್‌ಗಳನ್ನು ಹೊದಲು ರೈಲ್ವೆ ಯೋಜಿಸುತ್ತಿದೆ. ದೇಶದಲ್ಲಿರುವ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು ಕೂಡ ಸರಕಾರ ಸುಧಾರಿಸಲಿದೆ ಎಂದು ಅವರು ಹೇಳಿದ್ದಾರೆ. ಸರಕಾರದ ಪ್ರಾದೇಶಿಕ ಸಂಪರ್ಕ ಯೋಜನೆ 16 ನೂತನ ವಿಮಾನ ನಿಲ್ದಾಣಗಳನ್ನು ಜೋಡಿಸಿದೆ ಹಾಗೂ 56 ಕಾರ್ಯನಿರ್ವಹಿಸದ ವಿಮಾನ ನಿಲ್ದಾಣಗಳು ಹಾಗೂ 31 ಹೆಲಿಪ್ಯಾಡ್‌ಗಳನ್ನು ಜೋಡಿಸಲಿದೆ. ಜೇಟ್ಲಿ ನಡೆ ಇದಕ್ಕೆ ಉತ್ತೇಜನ ನೀಡಲಿದೆ. ಸಂಪರ್ಕಕ್ಕೆ ಉತ್ತೇಜನ ನೀಡಲು ಸರಕಾರ ಸಾಗರ ವಿಮಾನಕ್ಕೆ ಮೂಲ ಸೌಕರ್ಯ ರೂಪಿಸಲಿದೆ. ಭಾರತದಲ್ಲಿ ಸಮುದ್ರ ವಿಮಾನ ಸೇವೆ ನೀಡಲು ಸ್ಪೈಸ್ ಜೆಟ್ ಆಸಕ್ತಿ ತೋರಿಸಿದೆ ಎಂದು ಅರುಣ್ ಜೇಟ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News