ಎತ್ತಿನ ಹೊಳೆ ಯೋಜನೆ ದುಡ್ಡು ಮಾಡುವ ಯೋಜನೆ : ಡಾ.ಸಿ.ಆರ್.ಮನೋಹರ್

Update: 2018-02-01 17:55 GMT

ಬಾಗೇಪಲ್ಲಿ,ಫೆ.01: ಎತ್ತಿನ ಹೊಳೆ ಯೋಜನೆ ದುಡ್ಡು ಹೊಡೆಯುವ ಯೋಜನೆಯಾಗಿದ್ದು, ಇದರಿಂದ ರೈತರಿಗೆ ಯಾವುದೇ ಅನುಕೂಲವಿಲ್ಲ. ಈ ಯೋಜನೆಗೆ ವಿರುದ್ದವಾಗಿದ್ದು, ಪರಮಶಿವಯ್ಯ ವರದಿಗೆ ಪರವಾಗಿರುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಆರ್.ಮನೋಹರ್ ತಿಳಿಸಿದರು.

ಅವರು ತಾಲೂಕಿನ ಕದಿರನ್ನಗಾರಿಪಲ್ಲಿ,ಐವಾರ್ಲಪಲ್ಲಿ, ಗುರ್ರಾಲದಿನ್ನ ಗ್ರಾಮಗಳ ತಂಗುದಾಣಗಳನ್ನು ಲೋಕಾರ್ಪಣೆ ಮಾಡಿ ಹಾಗೂ ಸಾಯಿಬಾಬಾ ಮಂದಿರ ಬಳಿ ಹೈಮಾಸ್ಕ್ ದೀಪಗಳಿಗೆ ಚಾಲನೆ ನೀಡಿ ಮಾತನಾಡಿ, ನನಗೆ ರಾಜಕೀಯವಾಗಿ ಜನ್ಮ ನೀಡಿದ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳ ಜನರನ್ನು ಮರೆಯುವುದಿಲ್ಲ. ವಿಧಾನಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಈ ಎರಡು ತಾಲೂಕುಗಳ ಮತದಾರರು ನನ್ನ ಪರ ಹೆಚ್ಚಾಗಿ ಮತ ಚಲಾಯಿಸಿ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದ್ದಾರೆ. ಈಗ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರು, ಅಭಿಮಾನಿಗಳು ನನ್ನ ಮೇಲೆ ಒತ್ತಡ ತರುತ್ತಿದ್ದಾರೆ. ಆದರೆ ಈ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅನೇಕ ಅಕ್ಷಾಂಕ್ಷಿಗಳಿದ್ದಾರೆ. ಹೈಕಮ್ಯಾಂಡ್ ಯಾರಿಗೆ ಟಿಕೆಟ್ ನೀಡುತ್ತದೋ ಕಾದು ನೋಡಬೇಕಾಗಿದೆ ಎಂದರು.

ಫೆಬ್ರವರಿ 17ರಂದು ರಾಜ್ಯ ಜೆಡಿಎಸ್ ಪಕ್ಷದ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಆಗ ಟಿಕೆಟ್ ಯಾರಿಗೆ ಎಂದು ಖಾತ್ರಿಯಾಗುತ್ತದೆ. ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನಲ್ಲಿ ಸರಕಾರದಿಂದ ಬಂದಿರುವ ಅನುದಾನವನ್ನು ನಾನು ಪ್ರಾಮಾಣಿಕವಾಗಿ ವಿತರಣೆ ಮಾಡಿದ್ದೇನೆ. ತಾಲೂಕಿನಲ್ಲಿ ಬಸ್ ತಂಗುದಾಣಗಳು, ಹೈಮಾಸ್ಕ್ ದೀಪ ಹಾಗೂ ಶುದ್ದಕುಡಿಯುವ ನೀರಿನ ಘಟಕಗಳ ಸೇರಿದಂತೆ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿಸಿದ್ದೇನೆ ಎಂದರು.

ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವಧಿಯಲ್ಲಿ ಏನೂ ಅಭಿವೃದ್ದಿ ಕೆಲಸಗಳು ನಡೆದಿಲ್ಲ ಎಂದು ಆರೋಪಿಸಿದ ಅವರು, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ ರಸ್ತೆಗಳೇ ಇಲ್ಲವಾಗಿದೆ. ಹಾಲಿ ಇರುವ ರಸ್ತೆಗಳು ಹಳ್ಳ ಗುಣಿಗಳಿಂದ ಕೂಡಿದ್ದು ಸಂಚಾರಕ್ಕೆ ಯೋಗ್ಯವಲ್ಲವಾಗಿದೆ.ಬಸ್ ತಂಗುದಾಣ ಹಾಗೂ ಹೈಮಾಸ್ಕ್ ದೀಪಗಳ ಉದ್ಘಾಟನೆಗೆ ಬರಬೇಕು ಎಂದು ಕಾರ್ಯಕರ್ತರು ಕೇಳಿಕೊಂಡರು. ಆದರೆ ನಾನು ಇಲ್ಲಿಗೆ ಭೇಟಿ ನೀಡಿದಾಗ ಮೋಟಾರ್ ಬೈಕ್ ರ್ಯಾಲಿ ಮೂಲಕ ಸಾವಿರಾರು ಜನರು ನನ್ನ ಸ್ವಾಗತಿಸಿದರು ಎಂದ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹ ಬೇಡ. ಮುಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗುವುದು ಖಚಿತ. ಕರ್ನಾಟಕ ಜನರು ಬಿಜೆಪಿ ಮತ್ತು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಜೆಡಿಎಸ್ ಪಕ್ಷಕ್ಕೆ ಮಣೆ ಹಾಕಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಮುಖಂಡ ಸಿ.ಆರ್.ಗೋಪಿ, ತಾಪಂ ಸದಸ್ಯ ಕೆ.ಎನ್.ರಾಮಕೃಷ್ಣಾರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ಎ.ವಿ.ಪೂಜಪ್ಪ,ಮಾಜಿ ಸದಸ್ಯ ಸಿ.ಡಿ.ಗಂಗುಲಪ್ಪ, ವಿಧಾನಸಭೆ ಕ್ಷೇತ್ರದ ಉಸ್ತುವಾರಿ ಕೋನಪರೆಡ್ಡಿ, ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹನಾಯ್ಡು ಹಾಗೂ ಮುಖಂಡರಾದ ಶ್ರೀನಿವಾಸ(ಜಿನ್ನಿ) ಗೂಳೂರು ಲಕ್ಷ್ಮೀನಾರಾಯಣ,ಪ್ರದೀಪ್, ಎ.ಸೂರ್ಯನಾರಾಯಣರೆಡ್ಡಿ, ಪುರಸಭೆ ಮಾಜಿ ಸದಸ್ಯ ಮಹಮದ್ ನೂರುಲ್ಲಾ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News