“ಬಿಟ್‌ಕಾಯಿನ್ ವ್ಯವಹಾರ ಮಾಡುವವರಿಂದ ತೆರಿಗೆ ವಸೂಲಿ”

Update: 2018-02-02 14:36 GMT

ಹೊಸದಿಲ್ಲಿ, ಫೆ.2: ಬಿಟ್‌ಕಾಯಿನ್ ಮೂಲಕ ವ್ಯವಹಾರ ನಡೆಸುವವರಿಗೆ ‘ಹಲವು ಲಕ್ಷ’ ನೋಟಿಸ್ ನೀಡಲಾಗಿದ್ದು , ಇಲ್ಲಿ ಹೂಡಿಕೆ ಮಾಡಿರುವವರಿಂದ ತೆರಿಗೆ ವಸೂಲಿ ಮಾಡುವ ಕುರಿತು ಉಪಕ್ರಮಗಳನ್ನು ಆರಂಭಿಸಲಾಗಿದೆ ಎಂದು ಸಿಬಿಡಿಟಿ(ಕೇಂದ್ರೀಯ ನೇರ ತೆರಿಗೆಗಳ ಮಂಡಳಿ) ಅಧ್ಯಕ್ಷ ಸುಶೀಲ್‌ಚಂದ್ರ ತಿಳಿಸಿದ್ದಾರೆ. ಈ ರೀತಿ ಹೂಡಿಕೆ ಮಾಡುವ ಹಲವರು , ತಾವು ಪಡೆಯಲಿರುವ ಲಾಭದ ಬಗ್ಗೆ ‘ಮುಂಗಡ ತೆರಿಗೆ’ ಪಾವತಿಸುತ್ತಿಲ್ಲ ಎಂಬುದು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬಂದಿದೆ. ಅಲ್ಲದೆ ಕೆಲವರು ಈ ಹಿಂದೆ ತಾವು ಬಿಟ್‌ಕಾಯಿನ್ ಮೂಲಕ ನಡೆಸಿರುವ ವ್ಯವಹಾರದ ಮಾಹಿತಿಯನ್ನು ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಉಲ್ಲೇಖಿಸಿಲ್ಲ ಎಂದು ಸುಶೀಲ್‌ಚಂದ್ರ ಹೇಳಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಬಿಟ್‌ಕಾಯಿನ್ ವ್ಯವಹಾರದ ಬಗ್ಗೆ ಅಖಿಲ ಭಾರತ ಸಮೀಕ್ಷೆ ನಡೆಸಲಾಗಿದೆ. ಅದರ ಆಧಾರದಲ್ಲಿ ಹೂಡಿಕೆದಾರರಿಗೆ ನೋಟಿಸ್ ಜಾರಿಗೊಳಿಸಿದ್ದು ಹಲವರು ತೆರಿಗೆ ಪಾವತಿಸಲು ಒಪ್ಪಿದ್ದಾರೆ. ಖಂಡಿತವಾಗಿಯೂ ತೆರಿಗೆ ವಸೂಲಿ ಮಾಡುತ್ತೇವೆ ಎಂದವರು ತಿಳಿಸಿದ್ದಾರೆ.

 ಹಾಲಿ ಆರ್ಥಿಕ ವರ್ಷದಲ್ಲಿ ಇಲಾಖೆಯು ನೇರ ತೆರಿಗೆ ಸಂಗ್ರಹದ ಗುರಿಯನ್ನು ಮೀರಿದ ಸಾಧನೆ ತೋರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ತೃತೀಯ ತ್ರೈಮಾಸಿಕ ಅವಧಿಯಲ್ಲಿ ಸಂಗ್ರಹಿಸಿದ್ದಕ್ಕಿಂತ ಅಧಿಕ ಮುಂಗಡ ತೆರಿಗೆ ಅಂತಿಮ ತ್ರೈಮಾಸಿಕ ಅವಧಿಯಲ್ಲಿ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದರು.

ಎಷ್ಟು ನೋಟಿಸ್ ಜಾರಿಗೊಳಿಸಲಾಗಿದೆ ಎಂಬ ಪ್ರಶ್ನೆಗೆ, ಲಕ್ಷಾಂತರ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸುಶೀಲ್‌ಚಂದ್ರ ಉತ್ತರಿಸಿದರು. ಬಿಟ್‌ಕಾಯಿನ್ ಸೇರಿದಂತೆ ಎಲ್ಲಾ ರೀತಿಯ ಕ್ರಿಪ್ಟೊ ಕರೆನ್ಸಿಗಳು ಅಕ್ರಮವಾಗಿದ್ದು ಇವನ್ನು ನಿವಾರಿಸಲು ಸರಕಾರ ಸರ್ವಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ವಿತ್ತ ಸಚಿವ ಜೇಟ್ಲಿ ಬಜೆಟ್ ಭಾಷಣದಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News