ವಿಘಟನೀಯವಲ್ಲದ ಜೈವಿಕ ತ್ಯಾಜ್ಯ ಸಾಗಾಟ: ಗೋವಾದ ಪರವಾನಿಗೆ ನವೀಕರಿಸದ ಕರ್ನಾಟಕ

Update: 2018-02-02 15:59 GMT

ಪಣಜಿ, ಫೆ. 2: ವಿಘಟನೀಯವಲ್ಲದ ಜೈವಿಕ ತ್ಯಾಜ್ಯಗಳನ್ನು ಕರ್ನಾಟಕ್ಕೆ ಕೊಂಡೊಯ್ಯಲು ಗೋವಾಕ್ಕೆ ಇರುವ ಪರವಾನಿಗೆಯನ್ನು ಕರ್ನಾಟಕ ಸರಕಾರ ನವೀಕರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಗೋವಾದಲ್ಲಿ ಉತ್ಪತ್ತಿಯಾಗುವ ವಿಘಟನೀಯವಲ್ಲದ ಜೈವಿಕ ತ್ಯಾಜ್ಯಗಳನ್ನು ಕರ್ನಾಟಕದಲ್ಲಿರುವ ಎರಡು ಸಿಮೆಂಟ್ ಉತ್ಪಾದನಾ ಕಂಪೆನಿಗಳಿಗೆ ರವಾನಿಸಲಾಗುತ್ತಿತ್ತು. ಆದಾಗ್ಯೂ, ಈ ಕಂಪೆನಿಗಳಿಗೆ ತ್ಯಾಜ್ಯ ಸಾಗಿಸಲು ಗೋವಾದ ಪರವಾನಿಗೆಯನ್ನು ಕರ್ನಾಟಕದ ಅಧಿಕಾರಿಗಳು ನವೀಕರಿಸಿಲ್ಲ. ಇದರಿಂದ ತ್ಯಾಜ್ಯ ಗೋವಾದಲ್ಲೇ ಉಳಿದುಕೊಂಡಿದೆ ಎನ್ನಲಾಗಿದೆ.

 ಮಹಾದಾಯಿ ನದಿ ನೀರು ಹಂಚಿಕೆ ಕುರಿತಂತೆ ಎರಡೂ ರಾಜ್ಯಗಳು ತಮ್ಮ ನಿಲುವನ್ನು ಬದಲಾಯಿಸದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ವಿಘಟನೀಯವಲ್ಲದ ಜೈವಿಕ ತ್ಯಾಜ್ಯವನ್ನು ಕರ್ನಾಟಕದ ಸೇಡಂ ಜಿಲ್ಲೆಯಲ್ಲಿರುವ ವಾಸವದತ್ತಾ ಸಿಮೆಂಟ್ ಕಾರ್ಖಾನೆ ಹಾಗೂ ವಾಡಿ ಗ್ರಾಮದಲ್ಲಿರುವ ಎಸಿಸಿ ಸಿಮೆಂಟ್ ಕಾರ್ಖಾನೆಗೆ ಸಾಗಿಸಲು ಈ ವರ್ಷ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರವಾನಿಗೆ ನೀಡಿಲ್ಲ ಎಂದು ಗೋವಾ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘‘2017 ಡಿಸೆಂಬರ್ 31ರಂದು ಪರವಾನಿಗೆ ಅವಧಿ ಮುಗಿದಿತ್ತು. ಅನಂತರ ಹಲವು ಬಾರಿ ಕರ್ನಾಟಕ ಸರಕಾರವನ್ನು ಸಂಪರ್ಕಿಸಲಾಗಿತ್ತು. ಆದರೆ, ಅವರು ಪರವಾನಿಗೆ ನವೀಕರಿಸಲು ನಿರಾಕರಿಸಿದರು’’ ಎಂದು ಅವರು ಹೇಳಿದ್ದಾರೆ.

ಗೋವಾ ಪ್ರತಿ ತಿಂಗಳಿಗೆ 250-290 ಟನ್‌ಗಳಷ್ಟು ವಿಘಟನೀಯವಲ್ಲದ ಜೈವಿಕ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಇದನ್ನು ಕರ್ನಾಟಕದಲ್ಲಿ ಸಿಮೆಂಟ್ ಕಂಪೆನಿಗಳು ಸಿಮೆಂಟ್ ಉತ್ಪಾದನೆಗೆ ಕಚ್ಚಾ ವಸ್ತುವಾಗಿ ಬಳಸುತ್ತದೆ.

 ಕರ್ನಾಟಕ ಪರವಾನಿಗೆ ನವೀಕರಣಗೊಳಿದೇ ಇರುವುದರಿಂದ ಪ್ರಸ್ತುತ ತ್ಯಾಜ್ಯವನ್ನು ಉತ್ತರ ಗೋವಾದ ಸಾಲಿಗಾವೊ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಹಾಕಲಾಗಿದೆ. ತ್ಯಾಜ್ಯ ಸಾಗಾಟ ಮಾಡಲು ಪರವಾನಿಗೆಯನ್ನು ಒಂದು ವರ್ಷಕ್ಕೆ ವಿಸ್ತರಿಸಬೇಕು ಎಂದು ಕೋರಿ ಗೋವಾದ ತ್ಯಾಜ್ಯ ನಿರ್ವಹಣಾ ಮಂಡಳಿಯ ಕಾರ್ಯಕಾರಿ ನಿರ್ದೇಶಕ ಸಂಜಿತ್ ರೋಡ್ರಿಗಸ್ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಎರಡು ಬಾರಿ ಪತ್ರ ಬರೆದಿದ್ದರು. ಆದರೆ, ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ವಾಸವದತ್ತಾ ಸಿಮೆಂಟ್ ಕಂಪೆನಿಯನ್ನು 2017 ಸೆಪ್ಟಂಬರ್‌ನಲ್ಲಿ ಸಂಪರ್ಕಿಸಿತ್ತು ಹಾಗೂ ಪರವಾನಿಗೆ ನವೀಕರಿಸುವಂತೆ ಕೋರಿ ಪತ್ರ ಬರೆದಿತ್ತು. ಆದರೆ, ಕಂಪೆನಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News