ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹರ್ಯಾಣದಲ್ಲಿ ಹಲ್ಲೆ: ತನಿಖೆಗೆ ಮುಫ್ತಿ ಆಗ್ರಹ

Update: 2018-02-03 06:03 GMT

ಹೊಸದಿಲ್ಲಿ, ಫೆ.3: ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹರ್ಯಾಣದಲ್ಲಿ ನಡೆದ ಹಲ್ಲೆ ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ.

ಹರ್ಯಾಣ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಶುಕ್ರವಾರ ಹೇಳಿಕೆ ನೀಡಿರುವ ಮುಫ್ತಿ, ಮಹೇಂದ್ರಗಢ ಪಟ್ಟಣದಲ್ಲಿ ಶುಕ್ರವಾರದ ಪ್ರಾರ್ಥನೆ ಮುಗಿಸಿ ವಾಪಸ್ಸಾಗುತ್ತಿದ್ದಾಗ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮುಫ್ತಿ, "ಈ ಘಟನೆಯಿಂದ ಆಘಾತವಾಗಿದೆ" ಎಂದು ಹೇಳಿದ್ದಾರೆ.

ಜಮ್ಮು- ಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿ ಮಾಡಿ ಟ್ವೀಟ್ ಅಸ್ತ್ರ ಪ್ರಯೋಗಿಸಿದ್ದು, "ಕಾಶ್ಮೀರಿಗರನ್ನು ತಲುಪುವ ನಿಮ್ಮ ಯೋಚನೆಗೆ ಇದು ವಿರುದ್ಧವಾದದ್ದು" ಎಂದು ಟೀಕಿಸಿದ್ದಾರೆ. "ಇದು ಭೀತಿ ಹುಟ್ಟಿಸುವಂಥದ್ದು ಮತ್ತು ಕೆಂಪುಕೋಟೆಯ ತುದಿಯಿಂದ ಮೋದಿ ಸಾರಿದ ಸಂದೇಶದ ಆಶಯಕ್ಕೆ ವಿರುದ್ಧವಾದದ್ದು. ಹರ್ಯಾಣ ಅಧಿಕಾರಿಗಳು ಇಂಥ ಹಿಂಸಾಕೃತ್ಯದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.

ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕರು ಹರ್ಯಾಣ ಪೊಲೀಸ್ ಮುಖ್ಯಸ್ಥರ ಜತೆ ಚರ್ಚಿಸಿ, ಕಾಶ್ಮೀರಿ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News