ಮೂಡಿಗೆರೆ: ಅಕ್ರಮ ಜೂಜಾಟದ ವೀಡಿಯೋ ವೈರಲ್; ಇಬ್ಬರು ಪೊಲೀಸರ ಅಮಾನತು

Update: 2018-02-03 14:54 GMT

ಮೂಡಿಗೆರೆ, ಫೆ.3: ಕಳಸ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲಿ ಅಕ್ರಮ ಇಸ್ಪೀಟ್ ಆಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಅಕ್ರಮ ಜೂಜಾಟದ ಕುರಿತು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. 

ಮಲೆನಾಡಿನ ಪ್ರಸಿದ್ದ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಕಳಸ ಪಟ್ಟಣದ ಕಳಶೇಶ್ವರ ಜಾತ್ರೆ ನಡೆಯುತ್ತಿದ್ದ ಜ.31ರಂದು ಜೂಜಾಟ ನಡೆದಿದೆ ಎಂದು ಹೇಳಲಾಗಿದೆ. ಕಳಸೇಶ್ವರ ಜಾತ್ರೆ ಸಮಯಲ್ಲಿ ರಾತ್ರಿ ಸಮಯದಲ್ಲಿ ಅಂದರ್-ಬಾಹರ್ ಹೆಸರಿನ ಜೂಜಾಟ ಜೋರಾಗಿ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ.

ಪ್ರತಿನಿತ್ಯವೂ ಲಕ್ಷಾಂತರ ರೂ. ಕಟ್ಟಿ ಇಸ್ಪೀಟ್ ಆಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ದಂಧೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಅಂದರ್-ಬಾಹರ್ ಹೆಸರಿನ ಜೂಜಾಟದಲ್ಲಿ ಪೊಲೀಸರ ಪಾತ್ರ ಇರುವ ಬಗ್ಗೆ ಕಳಸ ಜನರಲ್ಲಿ ಅನುಮಾನ ಮೂಡಿದೆ.

ಇದರ ಬಗ್ಗೆ ವೀಡಿಯೋ ಮಾಡಿರುವ ಸ್ಥಳೀಯರು ಎಸ್ಪಿ ಕೆ.ಅಣ್ಣಾಮಲೈ ಅವರ ಗಮನಕ್ಕೆ ತಂದಿದ್ದಾರೆ. ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಬ್ಬರು ಪೊಲೀಸರ ಅಮಾನತು:

ಕಳಸ ಪೊಲೀಸ್ ಠಾಣೆ ಪಕ್ಕದಲ್ಲೇ ಶಾಮಿಯಾನ ಹಾಕಿಕೊಂಡು ಇಸ್ಪೀಟ್ ಆಡಿದ್ದ ವಿಡಿಯೋ ವೈರಲ್ ಆದ ಬೆನ್ನಿಗೇ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಆರೋಪದಡಿ ಪಿಎಸ್‍ಐ ಸಹಿತ ಇಬ್ಬರು ಪೊಲೀಸರನ್ನು ಅಮಾನತುಪಡಿಸಿ ಚಿಕ್ಕಮಗಳೂರು ಎಸ್ಪಿ ಕೆ.ಅಣ್ಣಾಮಲೈ ಆದೇಶ ಹೊರಡಿಸಿದ್ದಾರೆ. ಮೂಡಿಗೆರೆ ತಾಲೂಕಿನ ಕಳಸ ಪೊಲೀಸ್ ಠಾಣೆಯ ಪಿಎಸ್‍ಐ ರಘನಾಥ್ ಹಾಗೂ ಕಾನ್ಸ್ ಟೇಬಲ್ ರಂಗನಾಥ್ ಅಮಾನತುಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News