ಜನ ವಿರೋಧಿ, ರೈತ ವಿರೋಧಿ ಬಜೆಟ್: ದುಗ್ಗಪ್ಪಗೌಡ

Update: 2018-02-03 15:45 GMT

ಮೂಡಿಗೆರೆ, ಫೆ.3: ಜಾಗತೀಕರಣ ಮತ್ತು ಡಬ್ಲೂಟಿಒ ನೀತಿಗಳಿಗೆ ಅಧೀನವಾಗಿ ಬಂಡವಾಳಶಾಹಿ, ಶ್ರೀಮಂತರ ಹಿತಾಸಕ್ತಿಗೆ ತಕ್ಕಂತೆ ಕೇಂದ್ರ ಬಜೆಟ್ ಮಂಡನೆಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಆರೋಪಿಸಿದ್ದಾರೆ. 

ಅವರು ಶನಿವಾರ ಈ ಕುರಿತು ಹೇಳಿಕೆ ನೀಡಿ, ಕೃಷಿ ಕ್ಷೇತ್ರಕ್ಕೆ ಆದ್ಯತೆಗಳ ಮೇಲೆ ಆದ್ಯತೆ ಕೊಟ್ಟಿದ್ದೇವೆ ಎಂಬಂತೆ ಬಜೆಟ್ ಮಂಡನೆ ಮಾಡಿದ್ದಾರೆ. ಕೃಷಿಯಲ್ಲಿ ರೈತನ ಆದಾಯವನ್ನು ದುಪ್ಪಟ್ಟು ಮಾಡುವ ಅಂಶವೇ ಇಲ್ಲ. ರೈತರಿಗೆ ಮಾರುಕಟ್ಟೆಯಲ್ಲಿ ಆಗುವ ನಷ್ಟವನ್ನು ತಪ್ಪಿಸಲು ಇ-ಟ್ರೇಡಿಂಗ್, ಆನ್‍ಲೈನ್ ಮೂಲಕ ಖರೀದಿ ಮಾಡುವ ಹಾಗೂ ರೈತರಿಗೆ ಸಹಾಯವಾಗಲು 11 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲು ಮಂಡಿಸಲಾಗಿದೆ. ಆದರೆ ಇವೆಲ್ಲವೂ ಕಳೆದ ಬಾರಿ ಬಜೆಟ್‍ನಲ್ಲಿ ಮಂಡನೆಯಾದಂತಹ ಅಂಶಗಳೇ ಹೊರತು, ಇದರಲ್ಲಿ ಹೊಸ ಸ್ವರೂಪವನ್ನು ಪಡೆದಂತಹ ಅಂಶಗಳು ಯಾವುದೂ ಇಲ್ಲ. 11 ಲಕ್ಷ ಕೋಟಿ ಕೃಷಿ ಸಾಲಕ್ಕಾಗಿ ದೇಶದ ಕೃಷಿಯಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ಮಾಡಿ, ಈ ಕಂಪನಿಗಳಿಗೆ ಉತ್ತೇಜನ ನೀಡಲು ಎಲ್ಲಾ ರೀತಿಯ ಸಹಾಯವನ್ನು ಸರ್ಕಾರ ನೀಡುತ್ತಿದೆ. ಕೃಷಿಕರಿಗಿಂತಲೂ ಕಂಪನಿಗಳೇ ಈ ಸಾಲವನ್ನು ಪಡೆಯಲು ಹೆಚ್ಚು ಅವಕಾಶ ನೀಡಲಾಗಿದೆ ಎಂದಿದ್ದಾರೆ. 

ರೈತರು ಬೆಳೆದ ಬೆಳೆಗೆ ಲಾಭದಾಯಕ ಬೆಲೆಯನ್ನು ಖಾತರಿಪಡಿಸಲು ಯೋಜನೆಗಳನ್ನು ರೂಪಿಸಿಲ್ಲ. ರೈತರ ಆತ್ಮಹತ್ಯೆ ತಡೆಗೆ, ರೈತ ಸಾಲದ ಸಂಕಷ್ಟದಲ್ಲಿದ್ದು, ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲಮನ್ನಾ ಇತರೆ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಕಿವಿಗೊಟ್ಟಿಲ್ಲ. ಈ ದೇಶದಲ್ಲಿ ಬಹುಸಂಖ್ಯಾತರಾದ ರೈತಾಪಿ ಮತ್ತು ಬಡಜನತೆಯ ಅಭಿಪ್ರಾಯ ಮತ್ತು ಪಾಲುದಾರಿಕೆಯಿಲ್ಲದೆ ಕೃಷಿಕರಿಗೆ ಯಾವುದೇ ಲಾಭವಾಗದ ರೀತಿಯಲ್ಲಿ ರೂಪಿಸಿರುವ ಬಜೆಟ್ ದುರದೃಷ್ಟಕರ.  ಜನವಿರೋಧಿ ಮತ್ತು ರೈತವಿರೋಧಿ ಬಜೆಟ್‍ನಿಂದ ನಿರಾಶೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News