ಸರಕಾರದ ಮಧ್ಯಪ್ರವೇಶ: ಗೋಹತ್ಯಾ ಮಸೂದೆಯನ್ನು ಹಿಂಪಡೆದ ಸುಬ್ರಮಣಿಯನ್ ಸ್ವಾಮಿ

Update: 2018-02-03 17:07 GMT

ಹೊಸದಿಲ್ಲಿ, ಫೆ.3: ಶುಕ್ರವಾರದಂದು ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ದೇಶಾದ್ಯಂತ ಗೋಹತ್ಯಾ ನಿಷೇಧಕ್ಕಾಗಿ ಖಾಸಗಿ ಸದಸ್ಯರ ಮಸೂದೆ ಜಾರಿಗೆ ಮುಂದಾದರು. ಆದರೆ ಕೂಡಲೇ ಮಧ್ಯಪ್ರವೇಶಿಸಿದ ಸರಕಾರವು, ಈಗಾಗಲೇ ಗೋವನ್ನು ರಕ್ಷಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದಾಗ ಸ್ವಾಮಿ ತಮ್ಮ ಮಸೂದೆಯನ್ನು ವಾಪಸ್ ಪಡೆದುಕೊಂಡರು. ಗೋರಕ್ಷಣಾ ಕಾಯ್ದೆಯ ಕುರಿತು ನಡೆದ ಎರಡೂವರೆ ಗಂಟೆಗಳ ಸಮಾಲೋಚನೆಯ ವೇಳೆ ಮೇಲ್ಮನೆಯಲ್ಲಿ ಮಾತಿನ ಸಮರವೇ ನಡೆಯಿತು. ಈ ವಿಷಯವನ್ನು ತಮಾಷೆಯಾಗಿ ಮಾಡಲಾಗಿದೆ ಎಂಬ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರ ಮಾತಿನಿಂದ ವಿಪಕ್ಷ ಸದಸ್ಯರು ಕೆಂಡಾಮಂಡಲವಾದರು.

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಆಗ ಅದನ್ನು ಸಾಕುವ ಮತ್ತು ರಕ್ಷಿಸುವ ಜವಾಬ್ದಾರಿ ಸರಕಾರದ ಮೇಲೆ ಬೀಳುತ್ತದೆ. ಮಾಂಸ ತಿನ್ನುವ ದೇಶಗಳ ಜೊತೆ ಭಾರತವು ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದು ಸಮಾಜವಾದಿ ಪಕ್ಷದ ಜಾವೇದ್ ಅಲಿ ಖಾನ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ಕಳೆದ ಮೂರೂವರೆ ವರ್ಷಗಳಿಂದ ಗೋವುಗಳ ರಕ್ಷಣೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಸರಕಾರವು ರೂಪಿಸಿದೆ ಎಂದು ಹೇಳಿದರು. ನಾವು ಕೂಡಾ ನಿಮ್ಮ ದಿಕ್ಕಿನಲ್ಲೇ ಸಾಗುತ್ತಿದ್ದೇವೆ ಎಂದು ಸ್ವಾಮಿಯವರಿಗೆ ಮನವರಿಕೆ ಮಾಡಲು ನಾನು ಬಯಸುತ್ತೇನೆ. ಹಾಗಾಗಿ ತಮ್ಮ ಮಸೂದೆಯನ್ನು ವಾಪಸ್ ಪಡೆಯುವಂತೆ ನಾನು ಕೋರುತ್ತೇನೆ ಎಂದು ಸಿಂಗ್, ಸುಬ್ರಮಣ್ಯನ್ ಸ್ವಾಮಿಯವರಲ್ಲಿ ಮನವಿ ಮಾಡಿದರು. ಸರಕಾರವು ಗೋವುಗಳನ್ನು ರಕ್ಷಿಸುವ ಮತ್ತು ಪೋಷಿಸುವ ಬಗ್ಗೆ ಸರಿಯಾದ ಕಾನೂನನ್ನು ರಚಿಸಲಿದೆ ಎಂಬ ಭರವಸೆಯಿಂದ ನಾನು ಈ ಮಸೂದೆಯನ್ನು ಹಿಂಪಡೆಯುತ್ತಿದ್ದೇನೆ. ನಾನು ಇನ್ನೊಂದು ಮಸೂದೆಯನ್ನು ಹಿಡಿದುಕೊಂಡು ಇಲ್ಲಿಗೆ ಮತ್ತೊಮ್ಮೆ ಬರುವಂತೆ ಮಾಡಬೇಡಿ ಎಂದು ಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News