ಹಜ್ ಯಾತ್ರಾರ್ಥಿಗಳಿಗೆ ಸ್ವತಂತ್ರ ಸಮಿತಿ ರಚನೆಗೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ

Update: 2018-02-05 15:02 GMT

ಹೊಸದಿಲ್ಲಿ, ಫೆ. 5: ಸರಕಾರಿ ನಿಯಂತ್ರಿತ ಹಜ್ ಸಮಿತಿಯನ್ನು ರದ್ದುಪಡಿಸಬೇಕು ಮತ್ತು ಹಜ್ ಯಾತ್ರಾರ್ಥಿಗಳಿಗಾಗಿ ಮಾಡಲಾಗುವ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಸ್ವತಂತ್ರ ಸಮಿತಿಯನ್ನು ರಚಿಸಬೇಕು ಎಂದು ಕೋರಿ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಲಾಗಿದೆ. ಇತ್ತೀಚೆಗೆ ಕೇಂದ್ರ ಸರಕಾರವು ಹಜ್ ಯಾತ್ರಾರ್ಥಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ಹಾಕಲಾಗಿದೆ. ಸಬ್ಸಿಡಿಯನ್ನು ರದ್ದುಮಾಡಿರುವ ಕಾರಣದಿಂದ ಸಮಿತಿಯ ವ್ಯವಹಾರಗಳನ್ನು ನೋಡಿಕೊಳ್ಳಲು ಸರಕಾರಿ ನಿಯಂತ್ರಿತ ಪೀಠದ ಅಗತ್ಯವಿಲ್ಲ ಮತ್ತು 2002ರ ಹಜ್ ಸಮಿತಿ ಕಾಯ್ದೆಯು ರದ್ದುಪಡಿಸಲು ಅರ್ಹವಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ದಿಲ್ಲಿ ಮೂಲದ ವಕೀಲರಾದ ಶಾಹಿದ್ ಅಲಿ ಕಳೆದ ವಾರ ಈ ದಾವೆಯನ್ನು ಹೂಡಿದ್ದಾರೆ. ಕೇಂದ್ರ ಸರಕಾರವು 1959ರಲ್ಲಿ ಮುಂಬೈಯಿಂದ ಜೆದ್ದಾಗೆ ವಿಮಾನದ ಮೂಲಕ ತೆರಳುವ ಹಜ್ ಯಾತ್ರಿಕರಿಗೆ ಸಬ್ಸಿಡಿಯನ್ನು ಘೋಷಿಸಿತ್ತು.

ಹಜ್ ಯಾತ್ರೆಗೆ ಅರ್ಜಿಗಳನ್ನು ಆಹ್ವಾನಿಸುವುದರಿಂದ ಹಜ್‌ನಿಂದ ಯಾತ್ರಿಕರು ವಾಪಸ್ ಬರುವ ವರೆಗಿನ ಹಜ್ ಸಮಿತಿಯ ಎಲ್ಲಾ ವ್ಯವಹಾರಗಳನ್ನು ಸರಕಾರವು ನೋಡಿಕೊಳ್ಳುವುದನ್ನು ಮುಂದುವರಿಸಬೇಕೇ ಎಂಬ ಪ್ರಶ್ನೆಯು ಕೇಂದ್ರವು ಹಜ್ ಸಬ್ಸಿಡಿ ಸ್ಥಗಿತಗೊಳಿಸಿದ ನಂತರ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಹಜ್ ಸಮಿತಿಯ ಈಗಿನ ಸಂವಿಧಾನವನ್ನು ರದ್ದುಗೊಳಿಸಿ ಭಾರತೀಯ ಮುಸ್ಲಿಮರು ತಮ್ಮದೇ ಸ್ವಂತ ಹಜ್ ಸಮಿತಿಯನ್ನು ರಚಿಸಲು ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಸಿಖ್ ಸಮುದಾಯವು ಈಗಾಗಲೇ ಸಿಖ್ ಗುರುದ್ವಾರ ಕಾಯ್ದೆಯ ಅಡಿಯಲ್ಲಿ ತಮ್ಮದೇ ಆದ ಸ್ವಂತ ಸಮಿತಿಯನ್ನು ಹೊಂದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತ ಮತ್ತು ಸೌದಿ ಅರೇಬಿಯಾದ ನಡುವೆ ಹಾರುವ ಎಲ್ಲಾ ವೈಮಾನಿಕ ಸಂಸ್ಥೆಗಳು ಹಜ್ ಯಾತ್ರಿಕರ ಟಿಕೆಟ್ ದರವನ್ನು ನಿಗದಿಪಡಿಸಲು ಬಹಿರಂಗ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುವಂತೆ ನಾಗರಿಕ ವಾಯುಯಾನ ಸಚಿವಾಲಯ ಆಹ್ವಾನಿಸಬೇಕೆಂದು ನಿರ್ದೇಶನ ನೀಡಬೇಕು ಅಥವಾ ಹಜ್ ಯಾತ್ರಿಕರೇ ನೇರವಾಗಿ ಟಿಕೆಟ್ ಖರೀದಿಸಲು ಅವಕಾಶ ನೀಡಬೇಕು. ಇದರಿಂದ ಹಜ್ ಯಾತ್ರಾರ್ಥಿಗಳಿಗೆ ಸ್ಪರ್ಧಾತ್ಮಕ ದರದಲ್ಲಿ ಟಿಕೆಟ್‌ಗಳು ಸಿಗುತ್ತವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ಹಿಂದೆ ವಾಯುಯಾನ ಸಚಿವಾಲಯವು ಹಜ್ ಯಾತ್ರಾರ್ಥಿಗಳು ಟಿಕೆಟ್‌ಗಳನ್ನು ಮಾರುಕಟ್ಟೆ ದರದಿಂದ ಆರು ಪಟ್ಟು ಹೆಚ್ಚು ದರ ನೀಡಿ ಖರೀದಿಸುತ್ತಿತ್ತು. ಇದು ಬಹುಶಃ ಭಾರತದಲ್ಲಿ ನಡೆದಿರುವ ಅತ್ಯಂತ ದೊಡ್ಡ ಹಗರಣವಾಗಿದೆ. ಇಷ್ಟೊಂದು ಹೆಚ್ಚಿನ ಮೊತ್ತದಲ್ಲಿ ಟಿಕೆಟ್‌ಗಳನ್ನು ಯಾಕೆ ಖರೀದಿಸಲಾಗಿದೆ ಎಂಬ ಬಗ್ಗೆಯೂ ತನಿಖೆ ನಡೆಸುವ ಅಗತ್ಯವಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News