ಹರ್ಯಾಣ: 5,000 ವರ್ಷ ಹಳೆಯ ಪೂರ್ವಹರಪ್ಪನ್ ಕಾಲದ ಪ್ರದೇಶದಲ್ಲಿ ಉತ್ಖನನ ಆರಂಭ

Update: 2018-02-05 15:19 GMT

ಚಂಡೀಗಡ, ಫೆ.5: ಹರ್ಯಾಣದ ಫತೇಬಾದ್ ಜಿಲ್ಲೆಯ ಕುನಲ್‌ನಲ್ಲಿರುವ 5,000 ವರ್ಷಗಳಷ್ಟು ಹಳೆಯ ಪೂರ್ವ ಹರಪ್ಪನ್ ಕಾಲದ ಪ್ರದೇಶದಲ್ಲಿ ಉತ್ಖನನ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಕುನಲ್‌ನಲ್ಲಿ ಪುರಾತತ್ವ ಇಲಾಖೆಯು 1986ರಲ್ಲೇ ಉತ್ಖನನ ಕಾರ್ಯವನ್ನು ಆರಂಭಿಸಿತ್ತು. ಈಗ ಸ್ವಲ್ಪ ಸಮಯದ ಅಂತರದ ನಂತರ ವಾಪಸ್ ಉತ್ಖನನ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ರಾಷ್ಟ್ರೀಯ ವಸ್ತುಸಂಗ್ರಹಾಲಯದ ಪ್ರಧಾನ ನಿರ್ದೇಶಕರಾದ ಬಿ.ಆರ್ ಮಣಿ ಮತ್ತು ಹರ್ಯಾಣ ಪುರಾತತ್ವಶಾಸ್ತ್ರ ಮತ್ತು ವಸ್ತುಸಂಗ್ರಹಾಲಯ ಇಲಾಖೆಯ ಉಪನಿರ್ದೇಶಕರಾದ ಬನಾನಿ ಭಟ್ಟಾಚಾರ್ಯ ಅವರು ರವಿವಾರದಂದು ಉತ್ಖನನ ಕಾರ್ಯವನ್ನು ಆರಂಭಿಸಿದರು. ಅವರ ಹೊರತಾಗಿ ಭಾರತೀಯ ಪುರಾತತ್ವ ಸಂಘದ ತಜ್ಞರು ಕೂಡಾ ಉತ್ಖನನದಲ್ಲಿ ಪಾಲ್ಗೊಂಡರು.

ಕುನಲ್‌ನಲ್ಲಿ ಪತ್ತೆಯಾಗಿರುವ ಕುರುಹುಗಳು ಭಾರತೀಯ ಉಪಖಂಡದಲ್ಲಿ ಪೂರ್ವ ಹರಪ್ಪನ್ ಇತಿಹಾಸದ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಮತ್ತು ಭವಿಷ್ಯದ ಸಂಶೋಧನೆಗಳಿಗೆ ಹೊಸ ಆಯಾಮಗಳನ್ನು ತೆರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ನಡೆಸಿದ ಉತ್ಖನನದ ವೇಳೆ ಆರು ಬಂಗಾರದ ಸರಗಳು, ಒಂದು ಕೈಕವಚ ಮತ್ತು ಬಳೆಗಳು ಹಾಗೂ 12,445 ಅಮೂಲ್ಯ ಹರಳುಗಳು ಪತ್ತೆಯಾಗಿದ್ದು. ಕ್ರಿಸ್ತಪೂರ್ವ 3,000ದಲ್ಲಿದ್ದ ಗ್ರಾಮೀಣ ಜೀವನಶೈಲಿಯನ್ನು ಗಮನಿಸಿದಾಗ ಈ ಅಮೂಲ್ಯ ವಸ್ತುಗಳನ್ನು ಹೊಂದಿದ್ದವರು ಅತ್ಯಂತ ಶ್ರೀಮಂತರಾಗಿದ್ದರು ಎಂಬುದು ತಿಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News