ವಸಂತ ಋತುವಿನ ಆಗಮನ: ಹೂಗಳಿಂದ ಕಂಗೊಳಿಸುತ್ತಿದೆ ಮೊಘಲ್ ಗಾರ್ಡನ್

Update: 2018-02-05 16:50 GMT

ಹೊಸದಿಲ್ಲಿ, ಫೆ.5: ವಸಂತ ಋತುವಿನ ಆಗಮನವಾಗುತ್ತಿದ್ದಂತೆ ಎಲ್ಲೆಡೆಯೂ ಗಿಡಮರಗಳು ಹೂಗಳಿಂದ ಕಂಗೊಳಿಸುತ್ತಿದ್ದು, ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್‌ನಲ್ಲಿ 10,000 ಟುಲಿಪ್ ಹೂಗಳು ಮತ್ತು 130 ವಿಧಗಳ ಗುಲಾಬಿ ಹೂಗಳು ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿದೆ.

ಮೊಘಲ್ ಗಾರ್ಡನ್‌ನ ಈ ವಿಹಂಗಮ ನೋಟವನ್ನು ವೀಕ್ಷಿಸಲು ಉದ್ಯಾನವನವನ್ನು ಇಂದಿನಿಂದ (ಫೆ.6) ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸಾರ್ವಜನಿಕರಿಗೆ ತೆರೆಯಲಿದ್ದಾರೆ. ಫೆ.6ರಿಂದ ಮಾರ್ಚ್ 9ರ ವರೆಗೆ ಬೆಳಿಗ್ಗೆ 9.30ರಿಂದ ಸಂಜೆ 4 ಗಂಟೆಯ ವರೆಗೆ ಉದ್ಯಾನವನವು ಸಾರ್ವಜನಿಕರ ವೀಕ್ಷಣೆಗೆ ತೆರದಿರಲಿದೆ. ಆದರೆ ಪ್ರತಿ ಸೋಮವಾರದಂದು ನಿರ್ವಹಣೆಗಾಗಿ ಮತ್ತು ಮಾರ್ಚ್ 2ರಂದು ಹೋಳಿ ಹಬ್ಬದ ಪ್ರಯುಕ್ತ ಉದ್ಯಾನವನವನ್ನು ಮುಚ್ಚಲಾಗುವುದು ಎಂದು ರಾಷ್ಟ್ರಪತಿಗಳ ಮಾಧ್ಯಮ ಕಾರ್ಯದರ್ಶಿಗಳಾದ ಅಶೋಕ್ ಮಲಿಕ್ ತಿಳಿಸಿದ್ದಾರೆ.

ಈ ವರ್ಷ ಉದ್ಯಾನೋತ್ಸವದ ಪ್ರಮುಖ ಆಕರ್ಷಣೆಯೆಂದರೆ ನೆದರ್‌ಲ್ಯಾಂಡ್ಸ್‌ನಿಂದ ತರಲಾಗಿರುವ ಎಂಟು ಬಣ್ಣಗಳಲ್ಲಿ ಕಂಗೊಳಿಸುವ 10,000 ಟುಲಿಪ್ ಹೂಗಳು. ಜನವರಿ ಆರಂಭದಿಂದಲೇ ಹೂಬಿಡಲು ಆರಂಭಿಸಿರುವ ಟುಲಿಪ್ ಗಿಡಗಳು ಫೆಬ್ರವರಿ ಕೊನೆಯವರೆಗೂ ಹೂವಿನಿಂದ ಕಂಗೊಳಿಸಲಿದೆ.

ಟುಲಿಪ್ ಹೊರತಾಗಿ 70 ಜಾತಿಯ ವಿವಿಧ ಹೂಗಳು ಮತ್ತು 135 ವಿಧಗಳ ವಿವಿಧ ಗುಲಾಬಿ ಹೂಗಳು ಮೊಘಲ್ ಗಾರ್ಡನ್‌ನ ಸೌಂದರ್ಯವನ್ನು ಹೆಚ್ಚಿಸಿದೆ. ಹಸಿರು ಗುಲಾಬಿ, ಕಪ್ಪು ಗುಲಾಬಿ ಸೇರಿದಂತೆ ಹಲವು ಅಪರೂಪದ ಗುಲಾಬಿ ಹೂಗಳು ಮೊಘಲ್ ಗಾರ್ಡನ್‌ನಲ್ಲಿ ವರ್ಷಪೂರ್ತಿ ಕಂಡುಬರುವ ಹೂಗಳಾಗಿವೆ.

ಹೂಗಳ ಹೊರತಾಗಿ ಮೊಘಲ್ ಗಾರ್ಡನ್‌ನಲ್ಲಿ ಜೀವವೈವಿಧ್ಯ ಉದ್ಯಾನವನ ಕೂಡಾ ಇದ್ದು ಜಿಂಕೆಗಳು, ಬಾತುಕೋಳಿಗಳು, ಟರ್ಕಿಗಳು ಮತ್ತು ವಲಸೆ ಬರುವ ಹಕ್ಕಿಗಳ ಜೊತೆಗೆ ಹಲವು ಪಕ್ಷಿಗಳನ್ನು ಕಾಣಬಹುದಾಗಿದೆ. ನಿರ್ದಿಷ್ಟ ಪರಿಮಳ ಮತ್ತು ರಚನೆಯನ್ನು ಹೊಂದಿರುವ ಗಿಡಗಳನ್ನು ಹೊಂದಿರುವ ಸ್ಪರ್ಶ ಸಂವೇದನಾ ಉದ್ಯಾನವನವನ್ನು 2004ರಲ್ಲಿ ಉದ್ಘಾಟಿಸಲಾಗಿದ್ದು ಇಲ್ಲಿನ ಗಿಡಗಳನ್ನು ದೃಷ್ಟಿಹೀನರೂ ಗುರುತಿಸಬಹುದಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ.

ರಾಷ್ಟ್ರಪತಿ ಭವನದ ಆತ್ಮವೆಂದೇ ಕರೆಯಲಾಗುವ ಮೊಘಲ್ ಗಾರ್ಡನ್‌ನ ವಿನ್ಯಾಸವನ್ನು 1917ರಲ್ಲಿ ಸರ್ ಎಡ್ವಿನ್ ಲುತ್ಯೆನ್ಸ್ ಎಂಬವರು ರಚಿಸಿದ್ದರು. ಆದರೆ 1928029ರಲ್ಲಿ ಅದಕ್ಕೆ ಬೇಕಾದ ಜಾಗವನ್ನು ಸಮತಟ್ಟು ಮಾಡಿ ಗಿಡಗಳನ್ನು ನೆಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News