ವಕೀಲನ ವಿರುದ್ಧ ರಾಜದೀಪ್ ಸರ್ದೇಸಾಯಿ ದೂರು

Update: 2018-02-05 17:38 GMT

ಇತ್ತೀಚಿಗೆ ಆಮ್ ಆದ್ಮಿ ಪಕ್ಷದ ಇಪ್ಪತ್ತು ಶಾಸಕರ ಅನರ್ಹತೆ ಹಿಂದಿದ್ದ ವಕೀಲ ಈತ 

ಹೊಸದಿಲ್ಲಿ, ಫೆ. 5: ತನ್ನ ಹೆಸರಲ್ಲಿ ವಕೀಲ ಪ್ರಶಾಂತ್ ಪಟೇಲ್ ಹಸಿ ಸುಳ್ಳನ್ನು ಟ್ವಿಟ್ಟರ್ ನಲ್ಲಿ ಹರಿ ಬಿಟ್ಟಿದ್ದಾರೆ ಎಂದು ಆರೋಪಿಸಿರುವ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರು ಪ್ರಶಾಂತ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ನೋಯ್ಡಾದ ಎಸ್ ಎಸ್ ಪಿ ಲವ್ ಕುಮಾರ್ ಅವರಿಗೆ ದೂರು ಸಲ್ಲಿಸಿರುವ ರಾಜದೀಪ್ ಅವರು ಪ್ರಶಾಂತ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ತನ್ನ ಹೆಸರಲ್ಲಿ " ಏಕ್ ಹಝರ್ ಹಿಂದುವೊಂಕು ಖತಲ್  ಕರೋ ( ಒಂದು ಸಾವಿರ ಹಿಂದೂಗಳನ್ನು ಕೊಲೆ ಮಾಡಿ ) " ಎಂದು ಹಸಿ ಸುಳ್ಳನ್ನು ಪ್ರಶಾಂತ್ ಪಟೇಲ್ ಎಂಬ ದೃಢೀಕೃತ ಟ್ವಿಟ್ಟರ್ ಖಾತೆ ಹೊಂದಿರುವ ವ್ಯಕ್ತಿ ಟ್ವೀಟ್ ಮಾಡಿದ್ದಾರೆ. ಇದು ಹಸಿ ಸುಳ್ಳಾಗಿದ್ದು, ಇದರ ಹಿಂದೆ ಷಡ್ಯಂತ್ರವಿದೆ. ಇದು ಸಮುದಾಯಗಳ ನಡುವೆ ಹಿಂಸೆ ಪ್ರಚೋದಿಸುವ ಹಾಗು ನನ್ನ ಹಾಗು ನನ್ನ ಕುಟುಂಬಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದು ರಾಜದೀಪ್ ದೂರಿದ್ದಾರೆ.

ವಕೀಲ ಪ್ರಶಾಂತ್ ಪಟೇಲ್  ಇತ್ತೀಚಿಗೆ ಭಾರೀ ಸುದ್ದಿಯಾಗಿದ್ದರು. ಆಮ್ ಆದ್ಮಿ ಪಕ್ಷದ ಇಪ್ಪತ್ತು ಶಾಸಕರು ಲಾಭದಾಯಕ ಹುದ್ದೆಯಲ್ಲಿದ್ದಾರೆ ಎಂದು ಆರೋಪಿಸಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಾಷ್ಟ್ರಪತಿಗೆ ಮೊದಲು ಮನವಿ ಸಲ್ಲಿಸಿದ್ದು ಇದೇ ಪ್ರಶಾಂತ್ . ಆ ಮನವಿ ಫಲ ನೀಡಿ ಇತ್ತೀಚಿಗೆ ಇಪ್ಪತ್ತು ಆಪ್ ಶಾಸಕರು ತಮ್ಮ ಸ್ಥಾನ ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News