ಈವರೆಗೆ ಯಾವುದೇ ರಾಜಕೀಯ ಪಕ್ಷ ಮಾಡದ ವಿಶಿಷ್ಟ ಪ್ರಯತ್ನಕ್ಕೆ ರಾಹುಲ್ ಕೈ!

Update: 2018-02-06 17:12 GMT

ಹೊಸದಿಲ್ಲಿ, ಫೆ.6: ಮುಂದಿನ ಚುನಾವಣೆಗೆ ಭಾರೀ ಸಿದ್ಧತೆಗಳನ್ನು ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ತನ್ನ ನಾಯಕರ ಹಾಗು ಪಕ್ಷದ ಜನಪ್ರಿಯತೆಯನ್ನು ಅಳೆಯಲು ಮಾಹಿತಿ ವಿಶ್ಲೇಷಣೆ ಘಟಕವೊಂದನ್ನು ಕಾಂಗ್ರೆಸ್ ಆರಂಭಿಸಿದ್ದು, ಈ ಪ್ರಯತ್ನಕ್ಕೆ ಕೈ ಹಾಕಿರುವ ಮೊದಲ ಪಕ್ಷವಾಗಿದೆ.

ಅನುಭವಿ ಡೇಟಾ ವಿಶ್ಲೇಷಕ ಹಾಗು ಮುಂಬೈಯ ಐಡಿಎಫ್ ಸಿ ಇನ್ ಸ್ಟಿಟ್ಯೂಟ್ ನ ಪ್ರವೀಣ್ ಚಕ್ರವರ್ತಿಯವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಘಟಕದ ಮುಖ್ಯಸ್ಥರಾಗಿ ನೇಮಕ ಮಾಡಿದ್ದಾರೆ.

“ಕಾರ್ಯಕರ್ತರ ಹಾಗು ಮತದಾರರನ್ನು ಅರ್ಥ ಮಾಡಿಕೊಳ್ಳುವಲ್ಲಿ ಡೇಟಾ ವಿಶ್ಲೇಷಣೆಯು ನೆರವಾಗಲಿದೆ ಹಾಗು ಪರಿಣಾಮಕಾರಿಯಾಗಿ ಕೆಲಸ ಮಾಡಲು ಈ ಮೂಲಕ ಸಾಧ್ಯವಾಗಲಿದೆ” ಎಂದು ಪ್ರವೀಣ್ ಚಕ್ರವರ್ತಿ ಹೇಳಿದ್ದಾರೆ.

ಕಂಪ್ಯೂಟರ್ ವಿಭಾಗವು ಡೇಟಾ ವಿಶ್ಲೇಷಣೆ ವಿಭಾಗದೊಂದಿಗೆ ವಿಲೀನಗೊಂಡಿದೆ. ಹೊಸ ಘಟಕವು ಸಂಸದ ಎಂ.ಪಿ. ರಾಜೀವ್ ಗೌಡ ನೇತೃತ್ವದ ಕಾಂಗ್ರೆಸ್ ಸಂಶೋಧನಾ ವಿಭಾಗದೊಂದಿಗೆ ಕೆಲಸ ಮಾಡಲಿದೆ.

ಮಾಹಿತಿಗಳಿಗೆ ನಾಯಕರನ್ನೇ ಅವಲಂಬಿಸಿರುವುದನ್ನು ತಪ್ಪಿಸಲು ಹಾಗು ಕಠಿಣ ಸಮಸ್ಯೆಗಳನ್ನು ತನ್ನ ತಂಡದೊಂದಿಗೇ ಎದುರಿಸಲು ರಾಹುಲ್ ಈ ಹೊಸ ತಂತ್ರದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ನಾಯಕರ. ಪಕ್ಷದ ಜನಪ್ರಿಯತೆಯ ಬಗ್ಗೆ ಈ ತಂಡವು ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಿದೆ. 2019ರ ಚುನಾವಣೆಯ ಸಂದರ್ಭ ಅಭ್ಯರ್ಥಿಗಳ ಆಯ್ಕೆಗೆ ಈ ಸಮೀಕ್ಷೆಯು ನೆರವಾಗಲಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News