ಬಿಜೆಪಿ ವಿರುದ್ಧ ಮಿತ್ರಪಕ್ಷ ಶಿರೋಮಣಿ ಅಕಾಲಿದಳ ಅಸಮಾಧಾನ

Update: 2018-02-07 15:29 GMT

ಹೊಸದಿಲ್ಲಿ, ಫೆ.7: ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ತೆಲುಗುದೇಶಂ ಪಕ್ಷವು ಬಿಜೆಪಿಯ ಅಗ್ರಪಂಕ್ತಿಯ ನಾಯಕತ್ವವು ಪ್ರದರ್ಶಿಸುತ್ತಿರುವ ಉದ್ದಟ ಧೋರಣೆಯಿಂದ ಬೇಸತ್ತು ಬಹಿರಂಗವಾಗಿ ಅಸಮಾಧಾನವನ್ನು ತೋಡಿಕೊಳ್ಳುತ್ತಿವೆ. ಇದೀಗ ಈ ಸಾಲಿಗೆ ಬಿಜೆಪಿಯ ಪಂಜಾಬ್‌ನ ಮಿತ್ರಪಕ್ಷ ಶಿರೋಮಣಿ ಅಕಾಲಿದಳ ಕೂಡಾ ಸೇರಿಕೊಂಡಿದೆ.

ಬಿಜೆಪಿ ನಾಯಕರು ತಮ್ಮ ಮಿತ್ರಪಕ್ಷಗಳನ್ನು ಉತ್ತಮವಾಗಿ ನಡೆಸಿಕೊಳ್ಳಬೇಕು. ಈ ಕಾರಣದಿಂದಲೇ ಈಗಾಗಲೇ ಶಿವಸೇನೆ ಮತ್ತು ಟಿಡಿಪಿ ಅಸಮಾಧಾನಗೊಂಡಿದೆ ಎಂದು ಅಕಾಲಿದಳದ ರಾಜ್ಯಸಭಾ ಸದಸ್ಯರಾದ ನರೇಶ್ ಗುಜ್ರಾಲ್ ಹೇಳುವ ಮೂಲಕ ಬಿಜೆಪಿ ನಾಯಕತ್ವದ ಬಗ್ಗೆ ಮೈತ್ರಿಕೂಟದೊಳಗೆ ಅಸಮಾಧಾನ ಹೊಗೆಯಾಡುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ.

ಆದರೆ ಶಿವಸೇನೆ ಮತ್ತು ಟಿಡಿಪಿಯಂತೆ ನಾವು ಎನ್‌ಡಿಎಯನ್ನು ತೊರೆಯುವುದಿಲ್ಲ. ಅದು ಸಾಧ್ಯವಿಲ್ಲ. ನಾವು ಬಿಜೆಪಿಯ ಹಳೆಯ ಮಿತ್ರಪಕ್ಷವಾಗಿದ್ದು ಎಲ್ಲರೂ ಬಿಜೆಪಿಯಿಂದ ದೂರ ಸರಿದ ಸಮಯದಲ್ಲೂ ನಾವು ಜೊತೆಗಿದ್ದೆವು. ನಮ್ಮ ಮತ್ತು ಬಿಜೆಪಿ ನಡುವೆ ಮುರಿಯದ ಬಾಂಧವ್ಯವಿದೆ ಎಂದು ಗುಜ್ರಾಲ್ ತಿಳಿಸಿದ್ದಾರೆ.

ಪ್ರತಿಪಕ್ಷಗಳು ಸಂಸತ್‌ನ ಹೊರಗೆ ಕೇಂದ್ರ ಸರಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಶಿವಸೇನೆ ಮತ್ತು ಟಿಡಿಪಿ ಕೂಡಾ ಕೈಜೋಡಿಸಿತು.

ಫೆಬ್ರವರಿ ಒಂದರಂದು ಅರುಣ್ ಜೇಟ್ಲಿ ಮಂಡಿಸಿದ ಬಜೆಟ್‌ನಲ್ಲಿ ಆಂಧ್ರಪ್ರದೇಶವನ್ನು ನಿರ್ಲಕ್ಷಿಸಲಾಗಿದೆ ಎಂದು ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಸೋಮವಾರ ಆರೋಪಿಸಿದ್ದರು. ಮತ್ತೊಂದೆಡೆ, ರೈತರಿಗೆ ಏನಾದರೂ ಮಾಡಿರುವ ಏಕೈಕ ಬಜೆಟ್ ಇದು. ತಮಗೆ ಪ್ರಾಶಸ್ತ್ಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ಚಂದ್ರಬಾಬು ನಾಯ್ಡು ಮತ್ತು ಶಿವಸೇನೆ ಅಸಮಾಧಾನಗೊಂಡಿದೆ ಎಂದು ಗುಜ್ರಾಲ್ ತಿಳಿಸಿದ್ದಾರೆ.

ಬಿಜೆಪಿಯು ಈ ಮೈತ್ರಿಕೂಟ ಮುರಿಯಲು ಬಿಡಬಾರದು. ಆದಷ್ಟು ಮಿತ್ರಪಕ್ಷಗಳನ್ನು ಜೊತೆಯಾಗಿ ಕೊಂಡೊಯ್ಯಲು ಪಕ್ಷವು ಪ್ರಯತ್ನಿಸಬೇಕು ಎಂದು ಗುಜ್ರಾಲ್ ಬಿಜೆಪಿಗೆ ಸಲಹೆ ನೀಡಿದ್ದಾರೆ.

ಲೋಕಸಭೆಯಲ್ಲಿ ಬಜೆಟ್ ಅಧಿವೇಶನವು ಮುಂದುವರಿದಿದ್ದು ಬುಧವಾರದಂದು ತೆಲುಗುದೇಶಂ ಪಕ್ಷದ ಸದಸ್ಯರಾದ ಜಯದೇವ್ ಗಲ್ಲಾ ಎನ್‌ಡಿಎ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದ ವಿಭಜನೆ ಮಾಡಿದ ಕಾಂಗ್ರೆಸ್‌ಗೆ ಜನರು ಶೂನ್ಯ ಸ್ಥಾನವನ್ನು ನೀಡಿದ್ದಾರೆ. ಈಗ ರಾಜ್ಯವನ್ನು ಮರುಸ್ಥಾಪಿಸಲು ಅಗತ್ಯವಿರುವ ಮೂಲಭೂತ ಸವಲತ್ತುಗಳನ್ನೂ ನೀಡದಿರುವ ನಿಮ್ಮ ಪರಿಸ್ಥಿತಿ ಹೇಗಾಗಬಹುದು ಎಂಬುದನ್ನು ಸ್ವಲ್ಪ ಯೋಚಿಸಿ ಎಂದು ಗಲ್ಲಾ, ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಅವರ ಮಾತಿಗೆ ಧ್ವನಿಗೂಡಿಸಿದ ತೆಲಂಗಾಣ ರಾಷ್ಟ್ರ ಸಮಿತಿಯ ಸದಸ್ಯರಾದ ಎ.ಪಿ ಜಿತೇಂದ್ರ ರೆಡ್ಡಿ, ಎರಡು ತೆಲುಗು ರಾಜ್ಯಗಳಿಗೂ ನೀಡಿರುವ ಭರವಸೆಯನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News