ಭಾರತದಲ್ಲಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆಯೆಷ್ಟು ಗೊತ್ತೇ?

Update: 2018-02-08 10:57 GMT

ಹೊಸದಿಲ್ಲಿ, ಫೆ.8: ಜಗತ್ತಿನ ಟಾಪ್ 5 'ಅಜ್ಞಾನಿ ದೇಶ'ಗಳಲ್ಲಿ ಭಾರತ ಕೂಡ ಒಂದಾಗಿದೆ ಎಂದು 'ದಿ ಪೆರಿಲ್ಸ್ ಆಫ್ ಪರ್ಸೆಪ್ಶನ್ 2017' ಸಮೀಕ್ಷೆಯೊಂದು ತಿಳಿಸಿದೆ. ಇಪ್ಸೊಸ್ ಮೋರಿ ನಡೆಸಿದ ಈ ಸಮೀಕ್ಷೆಯ ಭಾಗವಾಗಿ ಜಗತ್ತಿನ ವಿವಿಧ ದೇಶಗಳ 29,313 ಜನರನ್ನು ಸಂದರ್ಶಿಸಿ  ರೋಗ ನಿರೋಧಕ ಲಸಿಕೆ, ಸಕ್ಕರೆ ಕಾಯಿಲೆ, ಹದಿಹರೆಯದವರಲ್ಲಿ ಗರ್ಭಧಾರಣೆ, ಉಗ್ರವಾದ ಮುಂತಾದ ವಿಚಾರಗಳ ಬಗ್ಗೆ ಅವರ ಜ್ಞಾನವನ್ನು ಪರೀಕ್ಷಿಸಲಾಗಿತ್ತು.

ಅಂತಿಮವಾಗಿ ಈ ವಿಚಾರಗಳಲ್ಲಿ ಜಗತ್ತಿನ ಐದು ಅತ್ಯಂತ 'ಅಜ್ಞಾನಿ ರಾಷ್ಟ್ರ'ಗಳಲ್ಲಿ ಪ್ರಥಮ ಸ್ಥಾನ ದಕ್ಷಿಣ ಆಫ್ರಿಕಾಗೆ ಹೋದರೆ ನಂತರದ ಸ್ಥಾನಗಳು ಬ್ರೆಜಿಲ್, ಫಿಲಿಪ್ಪೀನ್ಸ್, ಪೆರು ಮತ್ತು ಭಾರತದ ಪಾಲಾಗಿವೆ.

ಭಾರತದ ವಿಚಾರದಲ್ಲಿ ಈ ಸಮೀಕ್ಷೆಯ ಕೆಲ ಮುಖ್ಯಾಂಶಗಳು ಹೀಗಿವೆ,

13ಕ್ಕಿಂತ ಮೇಲಿನ ಹರೆಯದ ಶೇ.64ರಷ್ಟು ಭಾರತೀಯರೆಲ್ಲರ ಬಳಿಯೂ ಫೇಸ್‍ಬುಕ್ ಖಾತೆಗಳಿವೆ ಎಂದು ಭಾರತೀಯರು ತಿಳಿದಿದ್ದಾರೆ. ವಾಸ್ತವವಾಗಿ ಕೇವಲ ಶೇ.8ರಷ್ಟು ಮಂದಿ ಮಾತ್ರ ಫೇಸ್ ಬುಕ್ ಖಾತೆಗಳನ್ನು ಹೊಂದಿದ್ದಾರೆ.

►ಕೆಲ ಲಸಿಕೆಗಳು ಆರೋಗ್ಯವಂತ ಮಕ್ಕಳಲ್ಲಿ ಆಟಿಸಂ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಶೇ.44ರಷ್ಟು ಭಾರತೀಯರು ಅಂದುಕೊಂಡಿದ್ದಾರೆ.

►ದೇಶದ ಒಟ್ಟು ಜನಸಂಖ್ಯೆಯ ಶೇ 47ರಷ್ಟು ಮಂದಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆಂದು ಸಮೀಕ್ಷೆಯಲ್ಲಿ ಭಾಗವಹಿಸಿದವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ವಾಸ್ತವವಾಗಿ ಕೇವಲ ಶೇ.9ರಷ್ಟು ಭಾರತೀಯರು ಮಾತ್ರ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ

ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ  ಸರಿಯಾದ ಉತ್ತರಗಳನ್ನು ನೀಡಲಾದ ದೇಶಗಳ ಪೈಕಿ ಸ್ವೀಡನ್, ನಾರ್ವೆ ಹಾಗೂ ಡೆನ್ಮಾರ್ಕ್ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ಈ ಸಮೀಕ್ಷೆಯನ್ನು 38 ದೇಶಗಳಲ್ಲಿ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News