ಮಸೀದಿಗಳಲ್ಲಿ ಧ್ವನಿವರ್ಧಕ: ಸೋನು ನಿಗಮ್ ಹೇಳಿಕೆಗೆ ಜಾವೇದ್ ಅಖ್ತರ್ ಟ್ವೀಟ್

Update: 2018-02-08 14:19 GMT

ಮುಂಬೈ, ಫೆ.8: ಮಸೀದಿಗಳಲ್ಲಿರುವ ಧ್ವನಿವರ್ಧಕಗಳಿಂದ ಬೆಳಗ್ಗಿನ ಜಾವ ‘ಅಝಾನ್’ ಕೇಳಿ ನಿದ್ದೆಯಿಂದ ಎದ್ದೇಳುವುದನ್ನು ತಾನು ಇಚ್ಛಿಸುವುದಿಲ್ಲ ಎಂದು ಕಳೆದ ವರ್ಷದ ಎಪ್ರಿಲ್‌ನಲ್ಲಿ ಗಾಯಕ ಸೋನು ನಿಗಮ್ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಇವರ ಹೇಳಿಕೆಯನ್ನು ಕವಿ ಮತ್ತು ಸಾಹಿತಿ ಜಾವೇದ್ ಅಖ್ತರ್ ಬೆಂಬಲಿಸಿ ಹೇಳಿಕೆ ನೀಡಿರುವುದು ಮತ್ತೊಮ್ಮೆ ವಿವಾದವನ್ನು ಸೃಷ್ಟಿಸಿದ್ದಾರೆ..

 ಜನವಸತಿ ಪ್ರದೇಶದಲ್ಲಿರುವ ಮಸೀದಿ ಸೇರಿದಂತೆ ಯಾವುದೇ ಪ್ರಾರ್ಥನಾ ಮಂದಿರ ಗಳಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು ಎಂಬ ಸೋನು ನಿಗಮ್ ಹಾಗೂ ಇತರರ ಹೇಳಿಕೆಯನ್ನು ತಾನು ಬೆಂಬಲಿಸುವುದಾಗಿ ಅಖ್ತರ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ತಕ್ಷಣ ಸಾಮಾಜಿಕ ಮಾಧ್ಯಮಗಳಲ್ಲಿ ಪರ ಹಾಗೂ ವಿರೋಧವಾಗಿ ಭಾರೀ ಪ್ರತಿಕ್ರಿಯೆ ಹರಿದುಬಂದಿದೆ.

 “ಓರ್ವ ಮುಸಲ್ಮಾನನಾಗಿ ನನಗೆ ಧ್ವನಿವರ್ಧಕ ಅಥವಾ ಇನ್ಯಾವುದೇ ಧಾರ್ಮಿಕ ಪ್ರಕ್ರಿಯೆಗಳಿಂದ ಸಮಸ್ಯೆಯಾಗಿಲ್ಲ. ಎಲ್ಲಾ ಧರ್ಮ ಹಾಗೂ ಅವರ ಧಾರ್ಮಿಕ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ತಮ್ಮ ಧಾರ್ಮಿಕ ನಂಬಿಕೆಯನ್ನು ಪಾಲಿಸಲು ಅವರಿಗೆ ಹಕ್ಕಿದೆ. ಪ್ರಚಾರ ಗಿಟ್ಟಿಸಿಕೊಳ್ಳಲು ಧರ್ಮದ ಬದಲು ಇತರ ವಿಷಯವನ್ನು ಬಳಕೆ ಮಾಡಿಕೊಳ್ಳುವಂತೆ ವಿನಂತಿಸುತ್ತೇನೆ” ಎಂದು ಓರ್ವರು ಟ್ವೀಟ್ ಮಾಡಿದ್ದಾರೆ.

“ಮಸೀದಿಯ ಧ್ವನಿವರ್ಧಕದಿಂದ ಬೆಳಗ್ಗಿನ ಜಾವ 5:30ಕ್ಕೆ ಅಥವಾ ದೇವಸ್ಥಾನದ ಧ್ವನಿವರ್ಧಕದಿಂದ ಬೆಳಗ್ಗಿನ ಜಾವ 4:30ಕ್ಕೆ ನಿದ್ದೆಯಿಂದ ಎಚ್ಚರಗೊಳ್ಳಲು ನನಗೆ ಇಷ್ಟವಿಲ್ಲ. ದೇವರಿಗೆ ಧ್ವನಿವರ್ಧಕಗಳ ಅಗತ್ಯವಿಲ್ಲ. ಯಾವುದೇ ಧರ್ಮದ ಇತಿಹಾಸದಲ್ಲೂ ಧ್ವನಿವರ್ಧಕಗಳಿಲ್ಲ” ಎಂದು ಮತ್ತೋರ್ವರು ಟ್ವೀಟ್ ಮಾಡಿದ್ದಾರೆ.

ತನ್ನ ಹೇಳಿಕೆಗೆ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಂತೆಯೇ ಮತ್ತೊಮ್ಮೆ ಟ್ವೀಟ್ ಮಾಡಿರುವ ಅಖ್ತರ್, “ಎಲ್ಲಾ ತಪ್ಪು ಸಂಪ್ರದಾಯಗಳ ಬಗ್ಗೆ ತಾನು ಧ್ವನಿಯೆತ್ತಿದ್ದೇನೆ. ಇಲ್ಲಿರುವ ಸಮಸ್ಯೆಯೆಂದರೆ, ಇತರರ ತಪ್ಪುಗಳನ್ನು ಗುರುತಿಸುವ ನಿಮಗೆ ನಿಮ್ಮ ತಪ್ಪುಗಳು ಕಾಣಿಸುತ್ತಿಲ್ಲ” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News