ಉ.ಪ್ರದೇಶ: 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು !

Update: 2018-02-08 15:09 GMT

ಲಕ್ನೊ, ಫೆ.8: ಹತ್ತು ಹಾಗೂ ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ವಿರುದ್ಧ ಉತ್ತರಪ್ರದೇಶ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವಂತೆಯೇ ಸುಮಾರು 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿರುವ ಬಗ್ಗೆ ವರದಿಯಾಗಿದೆ.

  ಪರೀಕ್ಷೆಯಲ್ಲಿ ನಕಲು ಮಾಡುವುದು ಹಾಗೂ ಇತರ ಅವ್ಯವಹಾರವನ್ನು ತಡೆಗಟ್ಟಲು ರಾಜ್ಯ ಸರಕಾರ ಕಠಿಣ ಕ್ರಮ ಕೈಗೊಂಡಿದೆ. ಈ ಕಾರಣ ಈ ಬಾರಿಯ ಪರೀಕ್ಷೆಯಲ್ಲಿ ಆರಂಭದ ಎರಡು ದಿನದ ಬಳಿಕ ಸುಮಾರು 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರೂ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಪಿಯುಸಿ ಶಿಕ್ಷಣ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟವನ್ನು ಖಾತರಿ ಪಡಿಸಿಕೊಳ್ಳಲು ಸರಕಾರ ದೃಢ ಸಂಕಲ್ಪ ಮಾಡಿದೆ. ನಕಲು ಮಾಡುವುದು ಅಥವಾ ಇತರ ರೀತಿಯಿಂದ ವಂಚಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವವರಿಗೆ ಅವಕಾಶ ನೀಡುವುದಿಲ್ಲ. ಪರೀಕ್ಷಾ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು ಪರೀಕ್ಷೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವಂತೆ ನೆರವಾಗಲು ಪರೀಕ್ಷಾ ಕೇಂದ್ರದ ಹೊರಗೆ ವಿಶೇಷ ಕಾರ್ಯಪಡೆ ಹಾಗೂ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಶಿಕ್ಷಣಾ ಇಲಾಖೆಯನ್ನೂ ಹೊಂದಿರುವ ಉತ್ತರಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮ ತಿಳಿಸಿದ್ದಾರೆ.

ಈ ಎಲ್ಲಾ ಕ್ರಮಗಳ ಪರಿಣಾಮವೋ ಎಂಬಂತೆ, ಪ್ರಥಮ ದಿನ ಹತ್ತನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದ 69,201 ವಿದ್ಯಾರ್ಥಿಗಳು , ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ 2,20,107 ವಿದ್ಯಾರ್ಥಿಗಳು ಅರ್ಧದಲ್ಲೇ ಪರೀಕ್ಷಾ ಕೊಠಡಿಯಿಂದ ಹೊರ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವರ್ಷ ಹತ್ತು ಮತ್ತು 12ನೇ ತರಗತಿ ಪರೀಕ್ಷೆ ಬರೆಯಲು ಒಟ್ಟು 66,37,000 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News