ಬೈಕ್ ಸವಾರನನ್ನು ಬಲಿ ಪಡೆದ ಬ್ಯಾರಿಕೇಡ್ ವಯರ್ !

Update: 2018-02-09 05:56 GMT

ಹೊಸದಿಲ್ಲಿ, ಫೆ. 8: ಎರಡು ಪೊಲೀಸ್ ಬ್ಯಾರಿಕೇಡ್‌ಗಳ ನಡುವೆ ಕಟ್ಟಲಾಗಿದ್ದ ಕಬ್ಬಿಣದ ವಯರ್ 21 ವರ್ಷದ ಹೆಲ್ಮೆಟ್ ರಹಿತ ಬೈಕ್ ಚಾಲಕನ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಗಂಟಲು ಸೀಳಿಹೋಗಿ ಯುವಕ ಮೃತಪಟ್ಟ ಘಟನೆ ವಾಯುವ್ಯ ದಿಲ್ಲಿಯ ನೇತಾಜಿ ಸುಭಾಶ್ ಲೇಸ್‌ನಲ್ಲಿ ಗುರುವಾರ ಸಂಭವಿಸಿದೆ.

ಮೃತಪಟ್ಟ ಯುವಕನನ್ನು ಅಭಿಷೇಕ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಕಂಪೆನಿಯೊಂದರಲ್ಲಿ ಕ್ಯಾಬ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈತ ಶಾಕುರ್‌ಪುರ ಕಾಲನಿಯ ಜೆ.ಜೆ. ಕಾಲನಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಡಿಸ್ಕೊ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದ.

  ಅಭಿಷೇಕ್ ಕೆಲಸದಿಂದ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ‘‘ಶಾಕುರ್‌ಪುರ ಪ್ರದೇಶದ ಎಫ್-ಬ್ಲಾಕ್‌ನಲ್ಲಿ ರಾತ್ರಿ 12 ಗಂಟೆ ಬಳಿಕ ಪೊಲೀಸರು ಎರಡು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಅಭಿಷೇಕ್ ಅಮಿತ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದುದರಿಂದ ವಯರ್ ಅನ್ನು ಗಮನಿಸಿರಲಿಲ್ಲ. ಇದರಿಂದ ದುರಂತ ಸಂಭವಿಸಿದೆ’’ ಎಂದ ು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ನೇತಾಜಿ ಸುಭಾಶ್ ಪ್ಲೇಸ್ ಪೊಲೀಸ್ ಠಾಣೆಯ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ವಾಯುವ್ಯ ಡಿಸಿಪಿ ಅವರು ತಿಳಿಸಿದ್ದಾರೆ.

‘ನನ್ನ ಮಗ ಪೊಲೀಸ್ ಪಡೆ ಸೇರಲು ಬಯಸಿದ್ದ. ಆತನ ಜೀವವನ್ನು ಪೊಲೀಸ್ ಪಡೆ ಬಲಿ ತೆಗೆದುಕೊಂಡಿತು. ಇದಕ್ಕೆ ಕಾರಣರಾದವರಿಗೆ ಶಿಕ್ಷೆ ನೀಡುವಂತೆ ನಾನು ಆಗ್ರಹಿಸುತ್ತೇನೆ’’ ಎಂದು ಯುವಕನ ತಾಯಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News