ಕಾಂಗ್ರೆಸ್ ವಿರುದ್ಧದ ‘ಆಕ್ರಮಣಕಾರಿ ಭಾಷಣ’ದಲ್ಲಿ ಸುಳ್ಳು ಮಾಹಿತಿ ನೀಡಿ ಚಪ್ಪಾಳೆ ಗಿಟ್ಟಿಸಿದ ಮೋದಿ

Update: 2018-02-09 09:55 GMT

ಹೊಸದಿಲ್ಲಿ, ಫೆ.9: ಬುಧವಾರ ಸಂಸತ್ತಿನಲ್ಲಿ ತಮ್ಮ ಆಕ್ರಮಣಕಾರಿ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನುತ್ಪಾದಕ ಸಾಲ ಪ್ರಮಾಣ (ಎನ್ ಪಿಎ) ದ ಬಗ್ಗೆ ಆವೇಶಭರಿತರಾಗಿ ನೀಡಿದ ಕೆಲವೊಂದು ಮಾಹಿತಿಗಳ ಬಗ್ಗೆ ಈಗ ಹಲವಾರು ಸಂದೇಹಗಳು ಎದ್ದಿವೆ. ಬ್ಯಾಂಕುಗಳ ಹೆಚ್ಚಿದ ಅನುತ್ಪಾದಕ ಸಾಲ ಪ್ರಮಾಣದ ವಿಚಾರದಲ್ಲಿ ಪ್ರಧಾನಿ ಹಿಂದಿನ ಕಾಂಗ್ರೆಸ್ ಸರಕಾರದತ್ತ ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದರು.

“ದೇಶದ ಹಿತದೃಷ್ಟಿಯಿಂದ ನಿಮ್ಮ ಆರೋಪಗಳನ್ನು ಕೇಳುತ್ತಾ ಬಂದಿದ್ದೆ. ಆದರೆ  ದೇಶಕ್ಕೆ ಬ್ಯಾಂಕುಗಳ ಎನ್‍ಪಿಎ ಅಥವಾ ಅನುತ್ಪಾದಕ ಸಾಲಗಳ  ಬಗೆಗಿನ ಸತ್ಯ ತಿಳಿಯುವ ಸಮಯ ಬಂದಿದೆ. ಅನುತ್ಪಾದಕ ಸಾಲಗಳು ಶೇ.100ರಷ್ಟು ಯುಪಿಎ ಸರಕಾರದ ಪ್ರಮಾದವಾಗಿದೆ” ಎಂದು ಪ್ರಧಾನಿ ಹೇಳಿದ್ದರು.

 ಆದರೆ ಪ್ರಧಾನಿ ಒದಗಿಸಿದ ಅಂಕಿಸಂಖ್ಯೆಗಳು ಮಾತ್ರ ಗೊಂದಲಕಾರಿಯಾಗಿತ್ತು. “ನೀವು ಅಧಿಕಾರದಲ್ಲಿದ್ದಷ್ಟು ಸಮಯ ಎನ್‍ಪಿಎ ಶೇ.36ರಷ್ಟಿತ್ತು ಎಂದು ಸುಳ್ಳು ಹೇಳಿದ್ದೀರಿ, ಆದರೆ 2014ರಲ್ಲಿ (ಬಿಜೆಪಿ ಅಧಿಕಾರಕ್ಕೆ ಬಂದ ವರ್ಷ) ನಾವು ಸತ್ಯ ಅರಸಲು ತೊಡಗಿ ಕಡತಗಳನ್ನು ಪರಿಶೀಲಿಸಲಾರಂಭಿಸಿದೆವು. ನೀವು ತಪ್ಪು ಅಂಕಿಸಂಖ್ಯೆಗಳನ್ನು ನೀಡಿದ್ದಿರೆಂದು ನಮಗೆ ತಿಳಿಯಿತು. ಎನ್‍ಪಿಎ ಶೇ 82ರಷ್ಟಿತ್ತು,'' ಎಂದು ಹೇಳಿದ್ದರು.

ಆದರೆ ಎನ್‍ಡಿಟಿವಿ ಈ ಬಗ್ಗೆ ಪರಿಶೀಲಿಸಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಕಿಅಂಶಗಳನ್ವಯ ಒಟ್ಟು ಸಾಲ ಪ್ರಮಾಣದಲ್ಲಿ ಎನ್‍ಪಿಎ ಪ್ರಮಾಣ 2013-14ರಲ್ಲಿ ಶೇ 3.8 ಆಗಿತ್ತೇ ವಿನಃ ಪ್ರಧಾನಿ ಹೇಳಿದಂತೆ ಶೇ 82 ಆಗಿರಲಿಲ್ಲ!.

``ಮಾರ್ಚ್ 2014ರಲ್ಲಿ ಬ್ಯಾಂಕುಗಳು ನೀಡಿದ ಒಟ್ಟು ಸಾಲದ ಪ್ರಮಾಣ ರೂ 52 ಲಕ್ಷ ಕೋಟಿಯಷ್ಟಿತ್ತು, ಇದು ಯುಪಿಎ ಸರಕಾರದ ಅವಧಿಯ ಅನುತ್ಪಾದಕ ಸಾಲದಿಂದಾಗಿದೆ, ಇದು ಭಾರತದ ಬಡವರ ಹಣ,'' ಎಂದೂ ಪ್ರಧಾನಿ ನುಡಿದಿದ್ದರು.

ಆದರೆ ವಾಸ್ತವದಲ್ಲಿ 52 ಲಕ್ಷ ಕೋಟಿ ರೂ. ಮೊತ್ತವು ಸಾರ್ವಜನಿಕ ರಂಗದ ಬ್ಯಾಂಕುಗಳು ನೀಡಿದ ಒಟ್ಟು ಸಾಲದ ಪ್ರಮಾಣವೇ ಹೊರತು ಅನುತ್ಪಾದಕ ಸಾಲದ ಪ್ರಮಾಣವಲ್ಲ. 2015-16ರಲ್ಲಿ, ಅಂದರೆ ಮೋದಿ ಸರಕಾರದ ಎರಡನೇ ವರ್ಷದಲ್ಲಿ  ಒಟ್ಟು ಎನ್‍ಪಿಎ ವಸ್ತುಶಃ ದ್ವಿಗುಣಗೊಂಡು ಶೇ 7.5ರಷ್ಟಿತ್ತು!.

ಪ್ರಧಾನಿ  ಎನ್‍ಪಿಎ ಬಗ್ಗೆ ನೀಡಿದ ಮಾಹಿತಿ ಹಾಗೂ ಪ್ರಧಾನಿಯ ಭಾಷಣದ ತುಣುಕನ್ನು  ಬಿಜೆಪಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಟ್ವೀಟ್ ಮಾಡಿತ್ತು. ಆದರೆ ವಾಸ್ತವಾಂಶಗಳ ಜತೆ ಎನ್‍ಡಿಟಿವಿ ಪತ್ರಕರ್ತರು ಬಿಜೆಪಿಗೆ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಮೂಲ ಟ್ವೀಟ್ ಅನ್ನು ಬಿಜೆಪಿ ಡಿಲೀಟ್ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News