ಆಂಧ್ರ ಪ್ರದೇಶ ಭಾರತದ ಭಾಗವಾಗಿಲ್ಲ ಎಂಬಂತೆ ಕೇಂದ್ರದ ವರ್ತನೆ: ಚಂದ್ರಬಾಬು ನಾಯ್ಡು ಆಕ್ರೋಶ

Update: 2018-02-09 10:10 GMT

ಹೊಸದಿಲ್ಲಿ, ಫೆ.9: ಆಂಧ್ರ ಪ್ರದೇಶಕ್ಕೆ ಮೀಸಲಿರಿಸಲಾದ ಕಡಿಮೆ ಅನುದಾನದ ವಿಚಾರದ ಮೇಲೆ ವಿತ್ತ ಸಚಿವ ಅರುಣ್ ಜೇಟ್ಲಿ ಕಳೆದ ಕೆಲ ದಿನಗಳ ಹಿಂದೆ ಎರಡನೇ ಬಾರಿಗೆ ಸಂಸತ್ತಿನಲ್ಲಿ ನೀಡಿದ ಹೇಳಿಕೆಯಿಂದ ಅಸಂತುಷ್ಟರಾಗಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ‘‘ಆಂಧ್ರ ಪ್ರದೇಶದ ಜನರು ದೇಶದ ಭಾಗವಾಗಿಲ್ಲವೇನೋ ಎಂಬಂತೆ ಕೇಂದ್ರ ವರ್ತಿಸುತ್ತಿದೆ’’ ಎಂದು ತಮ್ಮ ಪಕ್ಷದ ಸಂಸದರಿಗೆ ಹೇಳಿದ್ದಾರೆನ್ನಲಾಗಿದೆ.

ದುಬೈಯಲ್ಲಿರುವ ನಾಯ್ಡು ತಮ್ಮ ಪಕ್ಷದ ಸಂಸದರು ಹಾಗೂ ಇಬ್ಬರು ಕೇಂದ್ರ ಸಚಿವರೊಂದಿಗೆ ಟೆಲಿ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದ್ದು, ಪಕ್ಷದ ಮುಂದಿನ ನಡೆಯ ಬಗ್ಗೆ ಇಲ್ಲಿ ಮಾತುಕತೆ ನಡೆಸಲಾಗಿದೆಯೆನ್ನಲಾಗಿದೆ.

ಬಿಜೆಪಿ ನಾಯಕತ್ವ ತಮ್ಮನ್ನು ಮೂಲೆಗುಂಪು ಮಾಡಿದೆ ಎಂದು ಟಿಡಿಪಿ ಸಂಸದರು ಅಂದುಕೊಂಡಿದ್ದು, ರಾಜ್ಯದ ಬೇಡಿಕೆಗಳು ಈಡೇರುವ ತನಕ ಸಂಸತ್ತಿನಲ್ಲಿ ಪ್ರತಿಭಟನೆ ಮುಂದುವರಿಸಲು ತಮಗೆ ಸೂಚಿಸಲಾಗಿದೆ ಎಂದು ಲೋಕಸಭೆಯಲ್ಲಿ ಟಿಡಿಪಿಯ ಸದನ ನಾಯಕ ತೋಟ ನರಸಿಂಹನ್ ಹೇಳಿದ್ದಾರೆ.

ಆದಾಯ ಕೊರತೆ ಹಾಗೂ ಬಾಹ್ಯ ನೆರವಿನ ಯೋಜನೆಗಳ ಬಗೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಿ ಅಧಿಕಾರಿಗಳೊಡನೆ ನಡೆಸುವ ಚರ್ಚೆಯ ಫಲಿತಾಂಶವನ್ನನುಸರಿಸಿ ಟಿಡಿಪಿ ತನ್ನ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

ಟಿಡಿಪಿ ಅಗತ್ಯ ಬಿದ್ದರೆ ಎನ್‌ಡಿಎ ಮೈತ್ರಿ ಕೂಟದಿಂದ ಹೊರನಡೆಯಲು ಸಿದ್ಧವಿದೆ ಎಂದು ಆಂಧ್ರದ ಮಾನವ ಸಂಪನ್ಮೂಲ ಸಚಿವ ಗಂಟ ಶ್ರೀನಿವಾಸ್ ರಾವ್ ಗುರುವಾರವೇ ಹೇಳಿದ್ದರು.

ಆಂಧ್ರದ ಬೇಡಿಕೆಗಳನ್ನು ಕೇಂದ್ರ ಸಹಾನುಭೂತಿಯಿಂದ ಪರಿಶೀಲಿಸಲಿದ್ದು, ರಾಜ್ಯದೊಂದಿಗೆ ವಿಚಾರ ವಿನಿಮಯ ನಡೆಸಿ ಹೊಸ ಪ್ಯಾಕೇಜ್ ಅಂತಿಮಗೊಳಿಸಲಾಗುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಈಗಾಗಲೇ ಹೇಳಿದ್ದಾರೆ. ಕೇಂದ್ರ ಈಗಾಗಲೇ 4,500 ಕೋಟಿಯಷ್ಟು ಹಣವನ್ನು ನಬಾರ್ಡ್ ಮೂಲಕ ವಿವಿಧ ಯೋಜನೆಗಳಿಗೆ ಒದಗಿಸಿದೆ ಎಂದೂ ಜೇಟ್ಲಿ ಸಂಸತ್ತಿನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News