ಮಡಿಕೇರಿ: ನಗರಸಭೆ ನಿರ್ಲಕ್ಷ್ಯ ಆರೋಪ; ಬಿಜೆಪಿ ಪ್ರತಿಭಟನೆ

Update: 2018-02-09 12:30 GMT

ಮಡಿಕೇರಿ, ಫೆ.9: ನಗರಸಭೆಯ ಆಡಳಿತ ವೈಫಲ್ಯದ ವಿರುದ್ಧ ಮಡಿಕೇರಿ ನಗರ ಬಿಜೆಪಿ ಸಮಿತಿ 24 ಗಂಟೆಗಳ ಅಹೋ ರಾತ್ರಿ ಧರಣಿಯನ್ನು ನಗರಸಭೆ ಎದುರು ಇಂದು ಆರಂಭಿಸಿತು. ನಗರಸಭೆಯ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದ್ದರೂ ನಗರದ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.

ಫಾರಂ ಸಂಖ್ಯೆ 3ರ ಅರ್ಜಿ ವಿಲೇವಾರಿ ವಿಳಂಬ, ನಗರದಲ್ಲಿ ಶುಚಿತ್ವದ ಕೊರತೆ, ಯು.ಜಿ.ಡಿ ಕಾಮಗಾರಿಗಳ ಅವ್ಯವಸ್ಥೆ, ನಗರಸಭೆಯನ್ನು ಕಾಡುತ್ತಿರುವ ನೌಕರರ ಕೊರತೆ, ಸ್ಟೋನ್‍ಹಿಲ್ ಬಳಿ ಅವೈಜ್ಞಾನಿಕ ರೀತಿಯಲ್ಲಿ ಕಸವಿಲೇವಾರಿ ಮಾಡುತ್ತಿರುವುದರಿಂದ ಸುಬ್ರಮಣ್ಯ ನಗರದಲ್ಲಿ ಉಂಟಾಗಿರುವ ಅಶುಚಿತ್ವದ ವಾತಾವರಣ, ವಾಸದೃಢೀಕರಣ ಪತ್ರ ಮತ್ತು ಜನನ ಮರಣ ಪತ್ರ ನೀಡುವಲ್ಲಿ ವಿನಾಕಾರಣ ವಿಳಂಬ, ಮನೆ ಮತ್ತು ಕಟ್ಟಡಗಳ ಕಾಮಗಾರಿ ಮುಕ್ತಾಗೊಂಡ ಬಗ್ಗೆ ಪ್ರಮಾಣ ಪತ್ರ ನೀಡಲು ಅಡಚಣೆ, ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ, ಪಾರ್ಕಿಂಗ್ ವ್ಯವಸ್ಥೆ ಮತ್ತು ಸೂಕ್ತ ಮಾಹಿತಿಯನ್ನು ಒದಗಿಸದೆ ಇರುವುದು, ಗಾಂಧಿ ಮೈದಾನದಲ್ಲಿ ನಿಯಮ ಬಾಹಿರವಾಗಿ ವ್ಯಾಪಾರ ನಡೆಸಲು ಅವಕಾಶ ನೀಡುತ್ತಿರುವುದು, ಮಹದೇವಪೇಟೆ ರಸ್ತೆ ಅವ್ಯವಸ್ಥೆ, ನಗರದಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ತಲೆ ಎತ್ತುತ್ತಿರುವ ಶೀಟ್‍ಗಳ ಅಂಗಡಿ ಮಳಿಗೆಗಳು ಮತ್ತು ತೆರಿಗೆ ವಂಚನೆ, ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೂ ಸುಂಕವಸೂಲಿ ಮಾಡುತ್ತಿರುವುದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆಡಳಿತ ವ್ಯವಸ್ಥೆ ನಡುವಿನ ಹೊಂದಾಣಿಕೆಯ ಕೊರತೆ ಸೇರಿದಂತೆ ಅನೇಕ ಅವ್ಯವಸ್ಥೆಗಳ ವಿರುದ್ಧ ನಮ್ಮ ಪ್ರತಿಭಟನೆ ಎಂದು ಬಿಜೆಪಿ ನಗರಾಧ್ಯಕ್ಷರಾದ ಮಹೇಶ್ ಜೈನಿ ತಿಳಿಸಿದರು.

ಪ್ರತಿಭಟನೆಯಲ್ಲಿ ಸಾಂಕೇತಿಕವಾಗಿ ಪಾಲ್ಗೊಂಡ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ನಗರಸಭೆಯ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ನಗರಸಭೆಯ ಉಪಾಧ್ಯಕ್ಷರಾದ ಟಿ.ಎಸ್.ಪ್ರಕಾಶ್, ಬಿಜೆಪಿ ಸದಸ್ಯರು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನಾಪಂಡ ರವಿಕಾಳಪ್ಪ, ರಾಬಿನ್ ದೇವಯ್ಯ, ಉಪಾಧ್ಯಕ್ಷರಾದ ಬಿ.ಕೆ.ಅರುಣ್, ನಗರ ಬಿಜೆಪಿ ಉಪಾಧ್ಯಕ್ಷರಾದ ಬಿ.ಕೆ.ಜಗದೀಶ್, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಸುಬ್ರಮಣಿ, ಬಿ.ಎಂ.ರಾಜೇಶ್, ಮಹಿಳಾ ಮೋರ್ಚಾದ ನಗರಾಧ್ಯಕ್ಷರಾದ ಅನಿತಾಪೂವಯ್ಯ, ಯುವ ಮೋರ್ಚಾದ ನಗರಾಧ್ಯಕ್ಷರಾದ ಡಿಶು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಚುನಾವಣಾ ಗಿಮಿಕ್ 
ಬಿಜೆಪಿ ಪ್ರತಿಭಟನೆಯ ಕುರಿತು ಪ್ರತಿಕ್ರಿಯೆ ನೀಡಿದ ನಗರಸಭಾಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ಚುನಾವಣಾ ಗಿಮಿಕ್‍ಗಾಗಿ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News