ಮಕ್ಕಳ ಹಕ್ಕು ರಕ್ಷಣೆ ಆಯೋಗಗಳ ಹುದ್ದೆ ತುಂಬಿ: ಸರ್ವೋಚ್ಚ ನ್ಯಾಯಾಲಯ ನಿರ್ದೇಶನ

Update: 2018-02-09 15:11 GMT

ಹೊಸದಿಲ್ಲಿ, ಫೆ. 9: ಬಾಲ ನ್ಯಾಯ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಹಲವು ನಿರ್ದೇಶನಗಳನ್ನು ನೀಡಿದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ರಾಷ್ಟ್ರ ಹಾಗೂ ರಾಜ್ಯದಲ್ಲಿರುವ ಆಯೋಗಗಳ ಹುದ್ದೆ ತುಂಬುವಂತೆ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ನ್ಯಾಯಮೂರ್ತಿ ಮದನ್ ಬಿ. ಲೋಕೂರು ಹಾಗೂ ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲ ನ್ಯಾಯ ಮಂಡಳಿಯ ಹುದ್ದೆಗಳನ್ನು ನಿಯಮಕ್ಕೆ ಅನುಗುಣವಾಗಿ ಹಾಗೂ ತ್ವರಿತವಾಗಿ ತುಂಬುವಂತೆ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ.

ಹುದ್ದೆಗಳನ್ನು ತುಂಬುವಲ್ಲಿ ಆಗುವ ವಿಳಂಬ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಇದನ್ನು ತಪ್ಪಿಸಬೇಕು ಎಂದು ಹೇಳಿದೆ.

 ಬಾಲ ನ್ಯಾಯ (ಮಕ್ಕಳ ಆರೈಕೆ ಹಾಗೂ ರಕ್ಷಣೆ) ಕಾಯ್ದೆ 2015ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಲಾಪ ನೋಂದಣಿ ಮಾಡುವಂತೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಮನವಿ ಮಾಡಿದೆ. ಮಕ್ಕಳ ಸ್ನೇಹಿ ನ್ಯಾಯಾಲಯ ಸ್ಥಾಪಿಸಲು ಹಾಗೂ ಪ್ರತಿ ಜಿಲ್ಲೆಯಲ್ಲಿ ‘ದುರ್ಬಲ ಸಾಕ್ಷಿಗಳ ನ್ಯಾಯಾಲಯ’ಗಳನ್ನು ಸ್ಥಾಪಿಸುವಂತೆ ಕೂಡ ಸುಪ್ರೀಂ ಕೋರ್ಟ್ ಉಚ್ಚ ನ್ಯಾಯಾಲಯಕ್ಕೆ ಸೂಚಿಸಿದೆ.

 ಮಕ್ಕಳ ಹಕ್ಕುಗಳ ರಕ್ಷಣೆಗಿರುವ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗಿರುವ ರಾಜ್ಯ ಆಯೋಗ (ಎಸ್‌ಸಿಪಿಆರ್) ದ ಎಲ್ಲ ಹುದ್ದೆಗಳನ್ನು ತುಂಬಲು ಕೇಂದ್ರ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯ ಹಾಗೂ ರಾಜ್ಯ ಸರಕಾರ ಭರವಸೆ ನೀಡಬೇಕು. ಸಾಕಷ್ಟು ಸಿಬ್ಬಂದಿ ನಿಯೋಜಿಸಿದರೆ ಈ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ಇದರಿಂದ ಮಕ್ಕಳಿಗೆ ಲಾಭವಾಗಲಿದೆ ಎಂದು ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News