ಲೋಕಸಭೆಗೆ ವಿರಾಮ: ಅಧಿವೇಶನ ಮಾ.5ಕ್ಕೆ ಮುಂದೂಡಿಕೆ

Update: 2018-02-09 17:00 GMT

ಹೊಸದಿಲ್ಲಿ, ಫೆ.9: ಆಂಧ್ರಪ್ರದೇಶಕ್ಕೆ ಹೆಚ್ಚಿನ ಬಜೆಟ್ ಅನುದಾನಕ್ಕೆ ಒತ್ತಾಯಿಸಿ ಆಂಧ್ರಪ್ರದೇಶದ ಸಂಸದರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿರುವಂತೆಯೇ ಲೋಕಸಭೆಯ ಅಧಿವೇಶನವನ್ನು ಒಂದು ತಿಂಗಳ ವಿರಾಮದ ಕಾರಣ ಮುಂಡೂಡಲಾಗಿದೆ.

 ಶುಕ್ರವಾರದ ಕಲಾಪದಲ್ಲಿ ಮಂಡಿಸಲು ಪಟ್ಟಿಯಾಗಿದ್ದ ಪೇಪರ್(ದಾಖಲೆ)ಗಳನ್ನು ಮಂಡಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್ , ಮಾರ್ಚ್ 5ರಂದು ಸದನ ಮರುಸಮಾವೇಶಗೊಳ್ಳಲಿದೆ ಎಂದು ಪ್ರಕಟಿಸಿದರು.

 ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆಯೇ ಸದನದಲ್ಲಿ ಗದ್ದಲದ ಕಾರಣ ಕಲಾಪವನ್ನು ಮುಂದೂಡಲಾಯಿತು. ಬಳಿಕ ಮರುಸಮಾವೇಶಗೊಂಡಾಗ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಾದ ಟಿಡಿಪಿ(ತೆಲುಗುದೇಶಂ ಪಕ್ಷ) ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳ ಸುಮಾರು 15 ಸದಸ್ಯರು ಶೂನ್ಯವೇಳೆಯಲ್ಲಿ ಪ್ರತಿಭಟನೆ ಮುಂದುವರಿಸಿ ಸದನದ ಬಾವಿಗಿಳಿದು ಘೋಷಣೆ ಕೂಗಿದರು. ಇದೇ ವೇಳೆ ರಾಫೇಲ್ ಯುದ್ಧವಿಮಾನ ಒಪ್ಪಂದದ ಕುರಿತು ಸರಕಾರದ ಪ್ರತಿಕ್ರಿಯೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರೂ ಘೋಷಣೆ ಕೂಗತೊಡಗಿದಾಗ ಕಲಾಪವನ್ನು ಮುಂದೂಡಲಾಯಿತು. ಕಲಾಪ ಮುಂದೂಡಿದ ಬಳಿಕ ಸದನದಲ್ಲಿದ್ದ ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಜೊತೆ ಟಿಡಿಪಿ ಸದಸ್ಯರು ಮಾತುಕತೆ ನಡೆಸುತ್ತಿರುವುದು ಕಂಡು ಬಂದಿತು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡಬೇಕೆಂಬ ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಗುರುವಾರ ಟಿಡಿಪಿ ಸ್ಪಷ್ಟಪಡಿಸಿತ್ತು. ಕಳೆದ ಮಂಗಳವಾರ ಹೇಳಿಕೆ ನೀಡಿದ್ದ ವಿತ್ತಸಚಿವ ಅರುಣ್ ಜೇಟ್ಲಿ, ಆಂಧ್ರಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೇಂದ್ರ ಸರಕಾರ ಸಹಾನುಭೂತಿ ಹೊಂದಿದ್ದು , ವಿಶೇಷ ಪ್ಯಾಕೇಜ್ ನೀಡುವ ನಿರ್ಧಾರವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದರು.

ಇದೀಗ ಬಜೆಟ್ ಅಧಿವೇಶನದ ಮೊದಲಾರ್ಧ ಅಂತ್ಯಗೊಂಡಿದ್ದು ವಿರಾಮದ ಬಳಿಕ ಮಾರ್ಚ್ 5ರಿಂದ ದ್ವಿತೀಯಾರ್ಧದ ಅಧಿವೇಶನ ಆರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News