ಏಕ ನ್ಯಾಯಾಧೀಶರೆದುರು ಜೇಟ್ಲಿ ಪಾಟೀ ಸವಾಲು : ಹೈಕೋರ್ಟ್

Update: 2018-02-09 17:16 GMT

ಹೊಸದಿಲ್ಲಿ, ಫೆ.9: ಅರವಿಂದ್ ಕೇಜ್ರೀವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷ(ಆಪ್) ದ ಐವರು ಮುಖಂಡರ ವಿರುದ್ಧ ವಿತ್ತಸಚಿವ ಅರುಣ್ ಜೇಟ್ಲಿ ಹೂಡಿರುವ ಮಾನನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ, ಜೇಟ್ಲಿ ಅವರ ಪಾಟೀ ಸವಾಲು ಪ್ರಕ್ರಿಯೆಯನ್ನು ಏಕ ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಲು ದಿಲ್ಲಿ ಹೈಕೋರ್ಟ್ ನಿರ್ಧರಿಸಿದೆ.

ಇದುವರೆಗೆ ಹೈಕೋರ್ಟ್‌ನ ಜಂಟಿ ನೋಂದಣಾಧಿಕಾರಿ ಪಾಟೀ ಸವಾಲನ್ನು ನಡೆಸುತ್ತಿದ್ದು, ಇದೀಗ ಕ್ಷಿಪ್ರ ಹಾಗೂ ಅವಧಿಬದ್ಧವಾಗಿ ನಡೆಸುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಏಕನ್ಯಾಯಾಧೀಶರಿಗೆ ವರ್ಗಾಯಿಸಲಾಗಿದೆ ಎಂದು ನ್ಯಾಯಮೂರ್ತಿ ಮನ್‌ಮೋಹನ್ ತಿಳಿಸಿದ್ದಾರೆ. ಆದ್ದರಿಂದ ಫೆ.12ರಂದು ಸಚಿವ ಅರುಣ್ ಜೇಟ್ಲಿಯವರನ್ನು ಪಾಟೀ ಸವಾಲಿಗೆ ಒಳಪಡಿಸುವಂತೆ ಜಂಟಿ ನೋಂದಣಾಧಿಕಾರಿ ಈ ಹಿಂದೆ ಕೇಜ್ರಿವಾಲ್‌ಗೆ ಸೂಚಿಸಿರುವ ಆದೇಶ ನಿರರ್ಥಕವಾಗಿದೆ. ಇದೀಗ ಹೊಸ ದಿನಾಂಕ ಹಾಗೂ ಸಚಿವರಿಗೆ ಕೇಳಲಾದ ಪ್ರಶ್ನೆಗಳ ಪ್ರಸ್ತುತತೆಯನ್ನು ಕೋರ್ಟ್ ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.

 ವಿಚಾರಣೆಯನ್ನು ತ್ವರಿತವಾಗಿ ಮುಗಿಸಬೇಕಿರುವ ಕಾರಣ ಫೆ.12ರಂದೇ ಪಾಟೀಸವಾಲು ಪ್ರಕ್ರಿಯೆಯನ್ನು ಮುಗಿಸುವಂತೆ ಕೇಜ್ರೀವಾಲ್‌ರಿಗೆ ಜಂಟಿ ನೋಂದಣಾಧಿಕಾರಿ ಸೂಚಿಸಿದ್ದರು. ಇದನ್ನು ಆಕ್ಷೇಪಿಸಿ ಕೇಜ್ರೀವಾಲ್ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಪಾಟೀಸವಾಲನ್ನು ಏಕನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಲು ಜೇಟ್ಲಿ ಹಾಗೂ ಕೇಜ್ರೀವಾಲ್ ಪರ ವಕೀಲರು ಸಮ್ಮತಿಸಿದ್ದಾರೆ.

  ಜೇಟ್ಲಿ ಅವರನ್ನು ಪಾಟೀಸವಾಲಿಗೆ ಒಳಪಡಿಸುವ ವಿಷಯದ ಕುರಿತ ವಿಚಾರಣೆಯನ್ನು ಫೆ.12ಕ್ಕೆ ನಿಗದಿಗೊಳಿಸಿತು. 1999ರಿಂದ 2013ರವರೆಗೆ ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಮಂಡಳಿ (ಡಿಡಿಸಿಎ) ಅಧ್ಯಕ್ಷರಾಗಿದ್ದ ಸಂದರ್ಭ ಅರುಣ್ ಜೇಟ್ಲೀ ಭಾರೀ ಪ್ರಮಾಣದಲ್ಲಿ ಹಣದ ಅವ್ಯವಹಾರ ನಡೆಸಿದ್ದರು ಎಂದು ಕೇಜ್ರೀವಾಲ್ ಹಾಗೂ ಇತರ ಆಪ್ ಮುಖಂಡರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಜ್ರೀವಾಲ್, ರಾಘವ್ ಚಡ್ಡ, ಕುಮಾರ್ ವಿಶ್ವಾಸ್, ಅಶುತೋಷ್, ಸಂಜಯ್ ಸಿಂಗ್ ಹಾಗೂ ದೀಪಕ್ ಬಾಜ್‌ಪಾಯ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ಜೇಟ್ಲಿ ಹೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News