ಮಂಡ್ಯ: ಮೂಲಭೂತ ಸೌಕರ್ಯಗಳಲ್ಲಿ ವಸತಿ ಸೌಕರ್ಯ ಅವಶ್ಯಕ; ಎನ್.ಮಂಜುಶ್ರೀ

Update: 2018-02-09 17:59 GMT

ಮಂಡ್ಯ, ಫೆ.9: ಮೂಲಭೂತ ಸೌಕರ್ಯಗಳಾದ ಆಹಾರ, ಬಟ್ಟೆಗಳ ರೀತಿಯಲ್ಲಿ ವಸತಿ ಸೌಕರ್ಯ ಕೂಡ ಮನುಷ್ಯನಿಗೆ ಅತಿ ಅವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಹೇಳಿದರು.

ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಜಿಲ್ಲಾಡಳಿತ, ನಗರಸಭೆ ಹಾಗೂ ಲೀಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ವಸತಿ ಸಾಲಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ವಸತಿ ರಹಿತ ಕುಟುಂಬದವರಿಗೆ ವಸತಿ ಸಾಲ ಸೌಲಭ್ಯ ನೀಡುವಲ್ಲಿ ಜಿಲ್ಲೆ ಹಿಂದುಳಿದಿದೆ. ನಗರಸಭೆ, ಪ್ರತಿ ಪುರಸಭೆ ಹಾಗೂ ಪಟ್ಟಣ ಪಂಚಾಯತ್‍ಗಳಲ್ಲಿ  ವಸತಿ ಸಾಲದ ಕಾರ್ಯಾಗಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.

ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪ್ರಭುದೇವ್ ಮಾತನಾಡಿ, 2022ರೊಳಗೆ ಭಾರತದ ಪ್ರತಿ ನಿರ್ಗತಿಕ ಕುಟುಂಬದವರು ಮನೆಯನ್ನು ಹೊಂದಿರಬೇಕು ಎಂಬ ನಿಟ್ಟಿನಲ್ಲಿ  ಪ್ರತಿಯೊಂದು ಜಿಲ್ಲೆಗೂ ವರ್ಷಕ್ಕೆ 200 ಕೋಟಿ ರೂಗಳನ್ನು ಸರಕಾರ ವಸತಿ ಸಾಲಕ್ಕೆ ಮೀಸಲಿಟ್ಟಿದೆ. ಜಿಲ್ಲೆಯಲ್ಲಿ ಇವರೆಗೂ 147 ಕೋಟಿ ರೂಗಳು ಮಾತ್ರ ವಸತಿ ಸಾಲ ನೀಡಿದ್ದೇವೆ. ಸಾರ್ವಜನಿಕರು ಇದರ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಗರಸಭೆ ಮತ್ತು ಲೀಡ್ ಬ್ಯಾಂಕ್‍ಗಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ನಗರದಲ್ಲಿ ವಸತಿ ಸಾಲ ಸೌಲಭ್ಯದ ಫಲಾನುಭವಿಗಳಿಗೆ ಜಿಲ್ಲಾಧಿಕಾರಿಗಳು ಚೆಕ್ ವಿತರಣೆ ಮಾಡಿದರು.

ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೆಗೌಡ, ಉಪಾಧ್ಯಕ್ಷೆ ಸುಜಾತಮಣಿ, ಆಯುಕ್ತ ಟಿ.ಎನ್. ನರಸಿಂಹಮೂರ್ತಿ, ವಿಜಯ ಬ್ಯಾಂಕ್‍ನ ಪ್ರಾದೇಶಿಕ ವ್ಯವಸ್ಥಾಪಕ ಸತ್ಯನಾರಾಯಣ ನಾಯಕ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News