ಗೋವುಗಳನ್ನು ಗೋಶಾಲೆಗೆ ಮರಳಿಸುವ ಆದೇಶ: ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಹೈಕೋರ್ಟ್ ತಡೆ

Update: 2018-02-09 18:31 GMT

ಸಿದ್ದಾಪುರ (ಕೊಡಗು), ಫೆ.9: ಗೋ ಸಾಗಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗೋವುಗಳನ್ನು ಮರಳಿ ಗೋ ಶಾಲೆಗೆ ನೀಡುವಂತೆ ತೀರ್ಪು ನೀಡಿದ್ದ ಕೊಡಗು ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪಿಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಘಟನೆಯ ಹಿನ್ನೆಲೆ: ಕೆಲ ತಿಂಗಳುಗಳ ಹಿಂದೆ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಸಿದ್ದಾಪುರ ಪೊಲೀಸರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನೆಲ್ಯಹುದಿಕೇರಿಯಲ್ಲಿ ರಾತ್ರೋ ರಾತ್ರಿ 9 ಗೋವುಗಳನ್ನು ವಶಪಡಿಸಿಕೊಂಡ ಪೊಲೀಸರು ಮೈಸೂರಿನ ಗೋ ಶಾಲೆಗೆ ಸಾಗಿಸಿದ್ದರು ಎನ್ನಲಾಗಿದೆ.

ಬಳಿಕ ನೆಲ್ಯಹುದಿಕೇರಿಯ ನಿವಾಸಿ ಕೆ.ಎಂ. ಬಶೀರ್ ಎಂಬವರು, ತಾನು ಸಾಕಲು ತಂದಿದ್ದ ಜಾನುವಾರುಗಳನ್ನು ಪೊಲೀಸರು ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿದ್ದು, ಅವುಗಳನ್ನು ತನಗೆ ಮರಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪೊಲೀಸರ ಕ್ರಮದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಬಶೀರ್ ರವರ ಅರ್ಜಿ ಪರಿಶೀಲಿಸಿದ ಜಿಲ್ಲಾ ನ್ಯಾಯಾಲಯ, ಗೋವುಗಳನ್ನು ಬಶೀರ್ ಅವರಿಗೆ ಮರಳಿ ನೀಡುವಂತೆ ಗೋ ಶಾಲೆಗೆ ಆದೇಶ ನೀಡಿತ್ತು. ಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಮೈಸೂರಿನ ಮಹಾವೀರ್ ಚಂದ್ ಎಂಬವರು ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಚಂದ್‌ರ ಅರ್ಜಿ ಪರಿಶೀಲಿಸಿದ ಜಿಲ್ಲಾ ನ್ಯಾಯಾಲಯ ಗೋವುಗಳನ್ನು ಮರಳಿ ಗೋ ಶಾಲೆಗೆ ನೀಡುವಂತೆ ಆದೇಶಿಸಿತ್ತು.
ಈ ಆದೇಶದ ವಿರುದ್ಧ ಕೆ.ಎಂ. ಬಶೀರ್ ಮತ್ತೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು, ಈಗ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ ಮಹತ್ವದ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News