ಜನರು ನಿಮಗೆ ಮತ ನೀಡಿದ್ದು ರಾಮ ಮಂದಿರ ನಿರ್ಮಾಣಕ್ಕೆ ಹೊರತು ತ್ರಿವಳಿ ತಲಾಖ್ ಮಸೂದೆಗಲ್ಲ

Update: 2018-02-10 06:03 GMT

ಔರಂಗಾಬಾದ್, ಫೆ.10:  "ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲೆಂದು ಜನರು ಎನ್‍ಡಿಎ ಅನ್ನು ಅಧಿಕಾರಕ್ಕೆ ತಂದಿದ್ದಾರೆಯೇ ಹೊರತು ತ್ರಿವಳಿ ತಲಾಖ್  ಬಗ್ಗೆ ಕಾನೂನು ರಚಿಸಲು ಅಲ್ಲ'' ಎಂದು ಹೇಳುವ ಮೂಲಕ ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ  ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಔರಂಗಾಬಾದ್ ಹಾಗೂ ಪರ್ಭಾನಿ ನಗರಗಳ ಎರಡು ದಿನದ ಭೇಟಿಯಲ್ಲಿರುವ ತೊಗಾಡಿಯಾ  ಸುದ್ದಿಗಾರರೊಡನೆ ಮಾತನಾಡುತ್ತಿದ್ದರು.

"ರಾಮ ಮಂದಿರದ ಶೀಘ್ರ ನಿರ್ಮಾಣಕ್ಕೆ ಅನುವು ಮಾಡಿ ಕೊಡಲು ಸರಕಾರ ಕಾನೂನೊಂದನ್ನು ಜಾರಿಗೆ ತರಬೇಕು'' ಎಂದೂ ತೊಗಾಡಿಯಾ ಹೇಳಿದರು. "ತ್ರಿವಳಿ ತಲಾಖ್ ವಿಚಾರದಲ್ಲಿ ಕಾನೂನೊಂದನ್ನು ರಚಿಸುವುದೋ ಅಥವಾ ಬಿಡುವುದೋ ಎಂಬುದು ಸರಕಾರಕ್ಕೆ ಬಿಟ್ಟ ವಿಚಾರ. ಆದರೆ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೆ ತರಲೇ ಬೇಕು'' ಎಂದು ಅವರು ಹೇಳಿದರು.

"ನಮಗೆ ನ್ಯಾಯಾಂಗದ  ಮೇಲೆ ನಂಬಿಕೆಯಿದೆ.  ಆದರೆ ರಾಮ ಮಂದಿರ ನಿರ್ಮಾಣವಾಗದೇ ಇರುವುದರಿಂದ ಕಾನೂನು ರಚಿಸಿ  ಮಸೀದಿ ಹತ್ತಿರದಲ್ಲಿರದಂತೆ ಮಂದಿರ ನಿರ್ಮಾಣವಾಗಬೇಕು'' ಎಂದು ತೊಗಾಡಿಯಾ ತಿಳಿಸಿದರು.

ಹಿಂದೂ ಸಮಾಜ ಬಹಳ ಸಮಯದಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಕಾದು ಕುಳಿತಿದೆ. ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದದ ಮೇಲಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 14ಕ್ಕೆ ಮುಂದೂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ತೊಗಾಡಿಯಾ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚುವರಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News