ಶಾ ರ‍್ಯಾಲಿಗೆ ಅಡ್ಡಿ ಪಡಿಸುವುದಾಗಿ ಜಾಟ್ ಚಳುವಳಿಗಾರರ ಬೆದರಿಕೆ

Update: 2018-02-10 07:46 GMT

ಚಂಡೀಗಢ, ಫೆ. 10: ಹರ್ಯಾಣದ ಬಿಜೆಪಿ ಸರಕಾರವು 2016ರ ಫೆಬ್ರವರಿ ಯಲ್ಲಿ ನಡೆಸಿದ ಜಾಟ್ ಮೀಸಲಾತಿ ಆಂದೋಲನದ ಸಂದರ್ಭ 882 ಜನರ ವಿರುದ್ಧ ದಾಖಲಾಗಿದ್ದ 70 ಎಫ್‌ಐಆರ್ ಗಳನ್ನು ಹಿಂದಕ್ಕೆ ಪಡೆದುಕೊಂಡಿದೆ. ರಾಜ್ಯದ ಜಿಂದ್ ನಗರದಲ್ಲಿ ಫೆಬ್ರವರಿ 15ರಂದು ನಡೆಯಲಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರ‍್ಯಾಲಿಗೆ ಅಡ್ಡಗಾಲಿಕ್ಕುವುದಾಗಿ ಜಾಟ್ ಚಳುವಳಿಕಾರರು ಬೆದರಿಕೆಯೊಡ್ಡಿರುವ ಹಿನ್ನೆಲೆಯಲ್ಲಿ ಅವರ ಆಕ್ರೋಶವನ್ನು ತಗ್ಗಿಸಲೆಂದೇ ಫೆಬ್ರವರಿ 6ರಂದು ಸರಕಾರ ಮೇಲಿನ ಕ್ರಮ ಕೈಗೊಂಡಿದೆ ಎಂದು ಬಣ್ಣಿಸಲಾಗುತ್ತಿದೆ.

ವಾಪಸ್ ಪಡೆಯಲಾಗಿರುವ ಪ್ರಕರಣಗಳು ಸಣ್ಣ ಅಪರಾಧಗಳಿಗೆ ಸಂಬಂಧಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ. ವಿವಿಧ ಅಪರಾಧ ಪ್ರಕರಣಗಳನ್ನು ಎದುರಿ ಸುತ್ತಿದ್ದ 1980 ಜನರ ವಿರುದ್ಧದ 208 ಎಫ್‌ಐಆರ್ ಗಳನ್ನು ಸರಕಾರ ಇಲ್ಲಿಯ ತನಕ ವಾಪಸ್ ಪಡೆದಿದೆ ಎಂದು ತಿಳಿದುಬಂದಿದೆ.

ನಮ್ಮ ಸರಕಾರ ಮಾತ್ರ ಇಂತಹ ಕ್ರಮ ಕೈಗೊಂಡಿಲ್ಲ, ಹಿಂದಿನ ಭುಪಿಂದರ್ ಸಿಂಗ್ ಹೂಡಾ ಹಾಗೂ ಓಂ ಪ್ರಕಾಶ್ ಚೌತಾಲ ಸರಕಾರಗಳೂ ಇಂತಹ ಕ್ರಮ ಕೈಗೊಂಡಿದ್ದವು ಎಂದು ರಾಜ್ಯದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಕೃಷನ್ ಕುಮಾರ್ ಬೇಡಿ ತಿಳಿಸಿದ್ದಾರೆ.

ಆದರೆ ಸರಕಾರ ಕೇಸುಗಳನ್ನು ವಾಪಸ್ ಪಡೆದುಕೊಂಡಿದ್ದರೂ ಜಾಟ್ ಚಳುವಳಿಕಾರರು ಅದರಿಂದ ಸಂತುಷ್ಟರಾಗಿಲ್ಲ. ಹರ್ಯಾಣದಲ್ಲಿ ಜಾಟರ ಚಳುವಳಿಯ ಮುಂಚೂಣಿಯಲ್ಲಿರುವ ಅಖಿಲ ಭಾರತೀಯ ಜಾಟ್ ಆರಕ್ಷಣ್ ಸಮಿತಿ ತಾನು ಶಾ ರ‍್ಯಾಲಿಗೆ ಅಡ್ಡಿಯುಂಟು ಮಾಡುವುದಾಗಿ ಮತ್ತೆ ಹೇಳಿಕೊಂಡಿದೆ.

ಸರಕಾರದ ಕೇಸ್ ವಾಪಸಾತಿ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಸಮಿತಿಯ ಅಧ್ಯಕ್ಷ ಯಶಪಾಲ್ ಮಲಿಕ್ ‘‘ಇಂತಹ ಅಗ್ಗದ ತಂತ್ರಗಳ ಮೂಲಕ ಹಲವು ಸರಕಾರಗಳು ನಮ್ಮನ್ನು ಮೂರ್ಖರನ್ನಾಗಿಸಿವೆ. ಆದರೆ ನಮ್ಮ ಪ್ರತಿಭಟನೆ ನಿರ್ಧರಿಸಿದಂತೆಯೇ ಮುಂದುವರಿಯುವುದು. ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ದೊರೆಯುವ ತನಕ ನಮ್ಮ ಹೋರಾಟ ಮುಂದುವರಿಯುವುದು. ಸರಕಾರ ಜಾಟರ ವಿರುದ್ಧದ ಎಲ್ಲಾ ಪ್ರಕರಣಗಳನ್ನೂ ಹಿಂದಕ್ಕೆ ಪಡೆದುಕೊಳ್ಳಬೇಕು. ಅಲ್ಲಿಯ ತನಕ ಈ ಸಣ್ಣ ಪುಟ್ಟ ಪ್ರಕರಣಗಳ ವಾಪಸಾತಿ ಯಾವುದೇ ಪರಿಣಾಮ ಬೀರದು’’ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News