ಹನೂರು : ಸೇತುವೆ ಹಾಗೂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ

Update: 2018-02-10 12:03 GMT

ಹನೂರು,ಫೆ.10: ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಅಧಿಕಾರವಧಿಯಲ್ಲಿ ವಿವಿಧ ಇಲಾಖೆಯಡಿ ಹನೂರು ಕ್ಷೇತ್ರಕ್ಕೆ 3.5 ಸಾವಿರ ಕೋಟಿ ರೂ ಅನುದಾನ ಲಭಿಸಿದ್ದು, ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಆರ್. ನರೇಂದ್ರರಾಜೂಗೌಡ ತಿಳಿಸಿದರು.

ಹನೂರು ಸಮೀಪದ ಶಾಗ್ಯ ಗ್ರಾಪಂ ವ್ಯಾಪ್ತಿಯ ಲಾಸರ್‍ದೊಡ್ಡಿ- ಬೋಗಿಲದೊಡ್ಡಿ ಮಾರ್ಗಮಧ್ಯೆಯ ಉಡುತೊರೆ ಹಳ್ಳಕ್ಕೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ 1.75 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಹಾಗೂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. 

ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಕಾಂಗ್ರಸ್ ಪಕ್ಷದ ಶಾಸಕ ಎಂದು ಒಂದೇ ಕಾರಣದಿಂದ  ಕ್ಷೇತ್ರದಲ್ಲಿ ಒಂದು ಸಮುದಾಯ ನಿರ್ಮಾಣಕ್ಕೆ ಅನುದಾನ ನೀಡಲಿಲ್ಲ, ಅಂದು ತೋಮಿಯರ್ ಪಾಳ್ಯ ಚರ್ಚ್‍ನ ಸುತ್ತುಗೋಡೆ ನಿರ್ಮಾಣ ಮಾಡಲು ಸಂಸದರು ಮತ್ತು ಶಾಸಕರ ನಿಧಿಯಿಂದ ಕೇವಲ 4 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದವು, ಆದರೆ ಇಂದು ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳ ಚರ್ಚ್ ಗಳ ಅಭಿವೃದ್ದಿಗೆ 2ಕೋಟಿ 70ಲಕ್ಷ ರೂ. ನೀಡಿದ್ದೇನೆ. ಅದರಂತೆ ತೋಮಿಯರ್‍ಪಾಳ್ಯ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು 50ಲಕ್ಷ ರೂ., ಸ್ಮಶಾನದ ಅಭಿವೃದ್ದಿ ಕಾಮಗಾರಿಗಾಗಿ 25 ಲಕ್ಷ ರೂ.ನೀಡಿದ್ದೇನೆ ಮತ್ತು  ಹನೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಲಭಿಸಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ತೃಪ್ತಿ ನನಗಿದೆ. ಅಲ್ಲದೇ 141 ಸಮುದಾಯ ಭವನಗಳನ್ನು ಮಂಜೂರಾಗಿದ್ದು, ಈಗಾಗಲೇ 30ಕ್ಕೂ ಸಮುದಾಯ ಭವನಗಳನ್ನು ಉದ್ಘಾಟಿಸಲಾಗಿದೆ. ಇದರ ಜತೆಗೆ ಇನ್ನು 26 ಸಮುದಾಯ ಭವನಗಳು ಉದ್ಘಾಟನೆ ಸಿದ್ದವಾಗಿದ್ದು, ಉಳಿದವು ಪ್ರಗತಿಯಲ್ಲಿದೆ ಎಂದರು.

ಸಿಸಿ ರಸ್ತೆಗೆ ಇನ್ನೂ 2 ಕೋಟಿ ರೂ.:  ಕಳೆದ 5 ವರ್ಷದ ಅವಧಿಯಲ್ಲಿ ಎಸ್‍ಇಪಿ. ಟಿಎಸ್‍ಪಿ ಯೋಜನೆಯಡಿ ರಾಜ್ಯದಲ್ಲಿಯೇ ಹನೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರಕಿದೆ. ಇದರಿಂದ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಗಿರಿಜನರು ವಾಸಿಸುವ ಬಹುತೇಕ ಹಾಡಿಗಳಲ್ಲಿ ಈಗಾಗಲೇ ಸಿಸಿ ರಸ್ತೆ ಹಾಗೂ ಚರಂಡಿಯನ್ನು ನಿರ್ಮಿಸಲಾಗಿದೆ. ಅಲ್ಲದೇ ಕಳೆದ 2 ತಿಂಗಳ ಹಿಂದೆ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ 1.5 ಕೋಟಿ ರೂ. ಹಾಗೂ ಇದೀಗ ವಿಧಾನಸಭಾ ಅಧಿವೇಶನಕ್ಕೆ ತೆರಳಿದ್ದ ವೇಳೆ ಸಿಸಿ ರಸ್ತೆಗೆ ಸರ್ಕಾರದಿಂದ 2 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

ಶಾಗ್ಯ ಗ್ರಾ.ಪಂ.ಯಲ್ಲಿ 10 ಕೋಟಿ ರೂ. ಅಭಿವೃದ್ಧಿ ಕಾರ್ಯ: ಕಳೆದ 5 ವರ್ಷದ ಅಧಿಕಾರವಧಿಯಲ್ಲಿ ಶಾಗ್ಯ ಗ್ರಾಪಂ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಚರಂಡಿ, ಸಮುದಾಯ ಭವನ, ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ 10 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಅಲ್ಲದೇ ಗಂಗಾ ಕಲ್ಯಾಣ ಯೋಜನೆಯಡಿ 135 ಮಂದಿಗೆ ಪಂಪ್‍ಸೆಟ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರು: ಕ್ಷೇತ್ರದ 291 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಉದ್ಧೇಶದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಲಾಗಿತ್ತು. ಈ ನಿಟ್ಟಿನಲ್ಲಿ 437 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯು ಮಂಜೂರಾಗಿದ್ದು, ಮೊದಲ ಹಂತದಲ್ಲಿ 192 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಅಲ್ಲದೇ ಕ್ಷೇತ್ರದ ಹುಬ್ಬೆಹುಣಸೇ, ರಾಮನಗುಡ್ಡೆ ಹಾಗೂ ಗುಂಡಾಲ್‍ಡ್ಯಾಂ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯು ಮಂಜೂರಾಗಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಮರಗದಮಣಿ, ಡಿ.ಲೇಖಾ ರವಿಕುಮಾರ್ ತಾ.ಪಂ. ಅಧ್ಯಕ್ಷ ಆರ್. ರಾಜು, ಸದಸ್ಯೆ ಸುಮತಿ, ಫಾದರ್ ಸೂಸೈರಾಜ್, ಬಾನು ಪ್ರಕಾಶ್, ಗ್ರಾ.ಪಂ. ಅಧ್ಯಕ್ಷ ಜಾನ್‍ಪೌಲ್, ಸದಸ್ಯೆ ದೇವಮ್ಮ, ಇಂಜಿನಿಯರ್ ವೆಂಕಟೇಶ್  ವಿಶೇಷ ತಹಿಸಿಲ್ಧಾರ್ ಮಹದೇವಸ್ವಾಮಿ, ಮುಖಂಡರಾದ ಮೊದಲೈಮುತ್ತು, ಶಾಹುಲ್ ಅಹಮದ್, ನಾಗರ್ಜುನ್, ಚಾಲ್ಸ್ ಮಾದೇಶ್, ಹಾಗೂ ಇನ್ನಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News