ಜೆಡಿ(ಯು)ಗೆ ರಾಜೀನಾಮೆ ನೀಡಿದ ಸರ್ಫರಾಝ್ ಆಲಂ

Update: 2018-02-10 16:16 GMT

ಪಾಟ್ನಾ, ಫೆ. 10: ಅಮಾನತುಗೊಂಡಿರುವ ಜನತಾದಳ (ಸಂಯುಕ್ತ)ದ ಶಾಸಕ ಸರ್ಫರಾಝ್ ಆಲಂ ಶನಿವಾರ ಪಕ್ಷಕ್ಕೆ ರಾಜೀನಾಮೆ ನೀಡಿ ಆರ್‌ಜೆಡಿಗೆ ಸೇರುವ ಮೂಲಕ ತನ್ನ ತಂದೆ ಪ್ರತಿನಿಧಿಸುತ್ತಿರುವ ಅರಾರಿಯಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಸ್ಪಷ್ಟ ಸೂಚನೆ ನೀಡಿದ್ದಾರೆ.

  ಇಲ್ಲಿನ ಆರ್‌ಜೆಡಿ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ ತೀವಾರಿ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಆಲಂ ಅವರು ಆರ್‌ಜೆಡಿ ಸೇರಿದರು.

ಬಿಜೆಪಿಯೊಂದಿಗೆ ಕೈಜೋಡಿಸುವ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷ ಜೆಡಿ(ಯು) ಜಾತ್ಯತೀತ ಶಕ್ತಿಗೆ ದ್ರೋಹ ಎಸಗಿದೆ ಎಂದು ಅವರು ಆರೋಪಿಸಿದರು.

ಆಲಂ ಅವರ ತಂದೆ ಹಾಗೂ ಆರ್‌ಜೆಡಿ ಸಂಸದ ಮುಹಮ್ಮದ್ ತಸ್ಲಿಮುದ್ದೀನ್ ಪ್ರತಿನಿಧಿಸುತ್ತಿದ್ದ ಅರಾರಿಯಾ ಲೋಕಸಭಾ ಕ್ಷೇತ್ರ ಹಾಗೂ ಬಿಹಾರದ ಎರಡು ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ಉಪಚುನಾವಣೆ ಘೋಷಣೆ ಆದ ಬಳಿಕ ಈ ಬೆಳವಣಿಗೆ ನಡೆದಿದೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ತಸ್ಲಿಮುದ್ದಿನ್ ಅರಾರಿಯಾ ಲೋಕಸಭಾ ಕ್ಷೇತ್ರದಲ್ಲಿ ಎರಡು ಲಕ್ಷ ಮತಗಳ ಅಂತರದಿಂದ ಪ್ರಚಂಡ ಜಯಭೇರಿ ಬಾರಿಸಿದ್ದರು. ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಬಿಜೆಪಿ ಹಾಗೂ ಜೆಡಿ (ಯು) ಎರಡನೇ ಹಾಗೂ ಮೂರನೇ ಸ್ಥಾನ ಪಡೆದುಕೊಂಡಿತ್ತು.

ಜಾತ್ಯತೀತ ಶಕ್ತಿಯನ್ನು ಪ್ರತಿನಿಧಿಸುತ್ತಿರುವ ಜೆಡಿ(ಯು)ಗೆ ನಾನು ಸೇರಿದ್ದೆ. ಆದರೆ, ಜೆಡಿ(ಯು) ಅನಂತರ ಮಹಾ ಮೈತ್ರಿಯ ಭಾಗವಾಯಿತು. ಆ ಮೂಲಕ ಅದು ಜಾತ್ಯತೀತ ಶಕ್ತಿಗೆ ದ್ರೋಹ ಎಸಗಿತು. ನಾನು ಆರ್‌ಜೆಡಿ ಸೇರಲು ನನ್ನ ಮತದಾರರು ಹಾಗೂ ತಾಯಿಯ ಒತ್ತಡಕ್ಕೆ ಒಳಗಾದೆ ಎಂದು ಆಲಂ ಹೇಳಿದ್ದಾರೆ.

ಅರಾರಿಯಿಂದ ಟಿಕೆಟ್ ನೀಡುವ ಭರವಸೆಯನ್ನು ಆರ್‌ಜೆಡಿ ನೀಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿರ್ಧಾರವನ್ನು ಪಕ್ಷ ತೆಗೆದುಕೊಳ್ಳುತ್ತದೆ ಎಂದರು. ದಿಲ್ಲಿಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯೊಂದಿಗೆ ಅನುಚಿತವಾಗಿ ವರ್ತಿಸಿದ ದೂರಿನ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಅರಾರಿಯಾದ ಜೋಹಿಹಾತ್‌ನ ಶಾಸಕರಾಗಿದ್ದ ಆಲಂ ಅವರನ್ನು ಜೆಡಿ (ಯು) ಅಮಾನತುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News