ಉಡಾನ್ ಯೋಜನೆಯಡಿ 19 ವಿಮಾನ ನಿಲ್ದಾಣಗಳ ಅಭಿವೃದ್ಧಿ : ಆರ್.ವಿ.ದೇಶಪಾಂಡೆ

Update: 2018-02-10 17:29 GMT

ಬೆಂಗಳೂರು, ಫೆ.10: ಕೇಂದ್ರ ನಾಗರಿಕ ವಿಮಾನಯಾನ ಮಂತ್ರಾಲಯದ ಪ್ರಾದೇಶಿಕ ಸಂಪರ್ಕ ಯೋಜನೆ(ಉಡಾನ್)ಯಡಿಯಲ್ಲಿ ರಾಜ್ಯದಲ್ಲಿ ಒಟ್ಟು 19 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಬೀದರ್, ಹುಬ್ಬಳ್ಳಿ, ಅಮ್ಮಸಂದ್ರ, ಭಲ್ದೋಟಾ(ಕೊಪ್ಪಳ), ಎಚ್‌ಎಎಲ್, ಬಳ್ಳಾರಿ, ಬೀದರ್, ಚಿಕ್ಕಮಗಳೂರು, ಗಿಣಿಗೇರ(ಹೊಸಪೇಟೆ), ಹರಿಹರ, ಹಾಸನ, ಜಕ್ಕೂರು, ಕಾರವಾರ, ಕೋಲಾರ, ಕುಶಾಲನಗರ, ರಾಯಚೂರು, ಶಾಹಬಾದ್, ಯಾದಗಿರಿ ಹಾಗೂ ಯಲಹಂಕದಲ್ಲಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದರು.

ಉಡಾನ್ ಯೋಜನೆಗಾಗಿ ಪ್ರತ್ಯೇಕವಾಗಿ ನಿರ್ದಿಷ್ಟ ಅನುದಾನವನ್ನು ಒದಗಿಸಿಲ್ಲ. ಆದರೂ, ಈ ಯೋಜನೆಯಡಿಯಲ್ಲಿ ಆಯ್ಕೆಯಾಗುವ ವಿಮಾನಯಾನ ಸೇವಾ ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಮಂತ್ರಾಲಯದಿಂದ ನೀಡುವ ವಿಜಿಎಫ್ ಮೊತ್ತದಲ್ಲಿ ರಾಜ್ಯ ಸರಕಾರದ ಪಾಲಿನ ಶೇ.20ರಷ್ಟು ಮೊತ್ತವನ್ನು ಒದಗಿಸಲು ಪ್ರಾದೇಶಿಕ ಸಂಪರ್ಕ ಯೋಜನೆ ಲೆಕ್ಕ ಶೀರ್ಷಿಕೆಯಡಿ 5 ಕೋಟಿ ರೂ.ಅನುದಾನವನ್ನು ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಉಡಾನ್ ಯೋಜನೆಯಡಿ ಮೈಸೂರು ವಿಮಾನ ನಿಲ್ದಾಣ ಹಾಗೂ ವಿದ್ಯಾನಗರ ಬಳ್ಳಾರಿ(ಖಾಸಗಿ) ವಿಮಾನ ನಿಲ್ದಾಣಗಳಿಂದ ಅನುಕ್ರಮವಾಗಿ 2017ರ ಸೆ.20 ಮತ್ತು 21ರಂದು ವಿಮಾನಯಾನ ಸೇವೆಯನ್ನು ಕಾರ್ಯಾಚರಣೆಗೊಳಿಸಲಾಗಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ.

2017-18ನೆ ಸಾಲಿನಲ್ಲಿ ಈ ಯೋಜನೆಯಲ್ಲಿ ಒಳಗೊಂಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ಅಬಿವೃದ್ಧಿ ಕಾಮಗಾರಿಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ಪೂರ್ಣಗೊಳಿಸಲಾಗಿದೆ. ಬೀದರ್ ಹಾಗೂ ಕೊಪ್ಪಳ(ಭಲ್ದೋಟಾ- ಖಾಸಗಿ) ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News