ಚಲಿಸುತ್ತಿದ್ದ ಕಾರಲ್ಲೇ ಯುವತಿಯ ಸಾಮೂಹಿಕ ಅತ್ಯಾಚಾರ

Update: 2018-02-11 05:20 GMT

ಲೂಧಿಯಾನಾ,ಫೆ.11: ಬ್ಯೂಟೀಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಚಲಿಸುತ್ತಿದ್ದ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ನಾಲ್ಕು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳು ಪರಿಚಿತರಾಗಿದ್ದು, ಈ ಕೃತ್ಯ ಎಸಗಿದ ಬಳಿಕ ಜಲಂಧರ್ ಬೈಪಾಸ್ ಬಳಿ ಕಾರಿನಿಂದ ಇಳಿಸಿ ಹೋಗಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅತ್ಯಾಚಾರಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376 ಡಿ, 120 ಬಿ (ಅಪರಾಧ ಪಿತೂರಿ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 3 ಮತ್ತು ಪರಿಶಿಷ್ಟ ಜಾತಿ/ ಪಂಗಡದ ಕಾಯ್ದೆಯ ಸೆಕ್ಷನ್ 3ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಲ್ವಿಂದರ್ ಸಿಂಗ್, ಕುಲ್ವಂತ್ ಸಿಂಗ್ ಅಲಿಯಾಸ್ ಬಾಬಾ, ಜಸ್ಸಿ ಮತ್ತು ಹರ್ದೀಪ್ ಸಿಂಗ್ ಎಂದು ಗುರುತಿಸಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ಅವಧಿಯಲ್ಲಿ ಮಹಿಳೆಯೊಬ್ಬಳ ಜತೆಗೆ ಮನೆಗೆ ಬಂದು ವಧುವಿನ ಅಲಂಕಾರಕ್ಕಾಗಿ ಬ್ಯೂಟೀಷಿಯನ್ ಅಗತ್ಯವಿದೆ ಎಂದು ನಂಬಿಸಿ ಕಾರಿನಲ್ಲಿ ಕರೆದೊಯ್ದು ಚಲಿಸುವ ಕಾರಿನಲ್ಲೇ ಒಬ್ಬರ ಬಳಿಕ ಮತ್ತೊಬ್ಬರು ಅತ್ಯಾಚಾರ ಎಸಗಿದರು. ಜಲಂಧರ್ ಬೈಪಾಸ್ ಬಳಿಯಿಂದ ಆಟೊವೊಂದರಲ್ಲಿ ತನ್ನ ಸ್ನೇಹಿತೆಯ ಮನೆಗೆ ಬಂದಿದ್ದಾಗಿ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದಾರೆ. ಆರೋಪಿಗಳು ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಮನೆಯಲ್ಲೂ ಈ ವಿಷಯ ಮುಚ್ಚಿಟ್ಟಿದ್ದಳು.

ಆದರೆ ಶುಕ್ರವಾರ ತಂದೆ ತಾಯಿಯ ಬಳಿ ವಿಷಯ ಹೇಳಿದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಯುವತಿಗೆ ಜಾತಿನಿಂದನೆಯನ್ನೂ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆದಿದ್ದು, ಆರೋಪಿಗಳ ಜತೆಗಿದ್ದ ಮಹಿಳೆಯನ್ನು ಮಣಿ ಎಂದು ಗುರುತಿಸಲಾಗಿದೆ. ಈಕೆ ಆರೋಪಿಗಳ ಪೈಕಿ ಒಬ್ಬನ ಪತ್ನಿ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News