ಸೇನಾ ಶಿಬಿರದ ಮೇಲೆ ದಾಳಿ:ಐವರು ಯೋಧರು ಹುತಾತ್ಮ

Update: 2018-02-11 06:18 GMT

ಶ್ರೀನಗರ, ಫೆ.11: ಜಮ್ಮು ಮತ್ತು ಕಾಶ್ಮೀರದ ಸಂಜುವಾನ್ ಸೇನಾ ಶಿಬಿರದ ಮೇಲೆ  ಶನಿವಾರ ದಾಳಿ ನಡೆಸಿ ಅಡಗಿಕೊಂಡಿರುವ ಉಗ್ರರ ವಿರುದ್ಧ ಭಾರತದ ಸೇನೆಯಿಂದ ಕಾರ್ಯಾಚರಣೆ  ಎರಡನೇ ದಿನವೂ ಮುಂದುವರಿದಿದ್ದು, ಉಗ್ರರ ದಾಳಿಯಿಂದಾಗಿ ಐವರು ಯೋಧರು ಹುತಾತ್ಮರಾಗಿದ್ದಾರೆ.

 ಯೋಧರೊಬ್ಬರ  ತಂದೆ ಉಗ್ರರ  ಗುಂಡಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಉಗ್ರರ ಅಟ್ಟಹಾಸಕ್ಕೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿದೆ.

ಐವರು ಯೋಧರು, ನಾಲ್ವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೇನಾ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಕೊಲ್ಲಲಾಗಿದೆ

ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮವಾಗಿ ನಿನ್ನೆ ಯೋಧರಿಬ್ಬರು  ಹುತಾತ್ಮರಾಗಿದ್ದರು. ಗಾಯಗೊಂಡಿದ್ದ ಮೂವರು ಯೋಧರು ಇಂದು ಕೊನೆಯುಸಿರೆಳೆದಿದ್ದಾರೆ.

ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು  ಉಗ್ರರರನ್ನು ಹೊಡೆದುರುಳಿಸಲಾಗಿದೆ. ಸೇನಾ ಶಿಬಿರದ ಪಕ್ಕದ ಮನೆಯೊಂದರಲ್ಲಿ ಇನ್ನೂ ಕೆಲ ಉಗ್ರರು ಅಡಗಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಸೇನಾ ಶಿಬಿರದ ಪಕ್ಕದ ಮನೆಗಳಲ್ಲಿ ವಾಸವಾಗಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಡೆಗೂ ಗಮನ ಹರಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಸೇನಾ ಶಿಬಿರದ ಮೇಲೆ ದಾಳಿ ನಡೆಸಿರುವ ಉಗ್ರರು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News