ಸಲ್ಮಾನ್ ಹುಸೈನ್ ನದ್ವಿ ವಜಾಗೊಳಿಸಲು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧಾರ

Update: 2018-02-11 13:06 GMT

ಹೊಸದಿಲ್ಲಿ, ಫೆ.11: ಬಾಬರಿ ಮಸೀದಿ ವಿಷಯದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ)ಯ ನಿಲುವಿಗೆ ವಿರುದ್ಧವಾಗಿರುವ ಮೌಲಾನಾ ಸಲ್ಮಾನ್ ಹುಸೈನಿ ನದ್ವಿಯನ್ನು ಮಂಡಳಿ ಸದಸ್ಯತ್ವದಿಂದ ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ಎಐಎಂಪಿಎಲ್‌ಬಿ ತಿಳಿಸಿದೆ.

ಬಾಬರಿ ಮಸೀದಿ ವಿಷಯದಲ್ಲಿ ರಾಜಿ ಮಾಡಿಕೊಳ್ಳದಿರುವ ನಿಲುವನ್ನು ಮಂಡಳಿ ಒತ್ತಿಹೇಳುತ್ತಿದೆ. ಆದರೂ ಸಲ್ಮಾನ್ ನದ್ವಿ ಮಂಡಳಿಯ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಬೇರೆ ಆಯ್ಕೆಯಿಲ್ಲದೆ, ಅವರನ್ನು ವಜಾಗೊಳಿಸುವ ನಿರ್ಧಾರವನ್ನು ಸಮಿತಿ ಸರ್ವಾನುಮತಿಯಿಂದ ಅಂಗೀಕರಿಸಿದೆ ಎಂದು ಎಐಎಂಪಿಎಲ್‌ಬಿ ಸದಸ್ಯ ಸೈಯದ್ ಖಾಸಿಂ ರಸೂಲ್ ಇಲ್ಯಾಸ್ ತಿಳಿಸಿದ್ದಾರೆ.

  ನದ್ವಿ ಪ್ರಕರಣವನ್ನು ಮಂಡಳಿ ಅಧ್ಯಕ್ಷರು  ಸಮಿತಿಯೊಂದಕ್ಕೆ ಹಸ್ತಾಂತರಿಸಿದ್ದರು. ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ್ದ ನದ್ವಿ, ಸುನ್ನೀ ವಕ್ಫ್ ಮಂಡಳಿಯ ವಕೀಲರಾಗಿರುವ ಮಂಡಳಿ ಅಧ್ಯಕ್ಷರನ್ನು ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಂಡಳಿ ಅಧ್ಯಕ್ಷರು, ಅವರು ಏನು ಬೇಕಾದರೂ ಮಾಡಲಿ. ನದ್ವಿ ಬಾಬ್ರಿ ಮಸೀದಿ ಹೋರಾಟಕ್ಕೆ ಸೇರ್ಪಡೆಗೊಳ್ಳುವುದಕ್ಕೂ ಮೊದಲೇ(1986ರಿಂದಲೇ) ನಾವು ಹೋರಾಟದಲ್ಲಿ ಸಕ್ರಿಯವಾಗಿದ್ದೆವು ಎಂದು ಹೇಳಿದ್ದರು.

  ತಾನು ರವಿಶಂಕರ್ ಗುರೂಜಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ರಾಮಮಂದಿರ ನಿರ್ಮಿಸಲು ತನ್ನ ಬೆಂಬಲವನ್ನು ಸೂಚಿಸಿದ್ದೇನೆ ಎಂದು ಫೆ.9ರಂದು ನದ್ವಿ ಸುದ್ದಿಸಂಸ್ಥೆಗೆ ತಿಳಿಸಿದ್ದರು. ಅಲ್ಲದೆ ಈ ಪ್ರಕರಣವನ್ನು ನ್ಯಾಯಾಲಯದಿಂದ ಹೊರಗೆ ಇತ್ಯರ್ಥ ಪಡಿಸುವ ಬಗ್ಗೆಯೂ ಸೂಚನೆ ನೀಡಿದ್ದ ನದ್ವಿ, ನ್ಯಾಯಾಲಯದ ತೀರ್ಪು ಒಬ್ಬನ ಪರವಾಗಿದ್ದರೆ, ಇನ್ನೊಬ್ಬನ ವಿರೋಧವಾಗಿರುತ್ತದೆ. ಆದ್ದರಿಂದ ನ್ಯಾಯಾಲಯವು ಜನತೆಯ ಹೃದಯ ಬೆಸೆಯುವ ಕಾರ್ಯ ನಡೆಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

 ಇದಕ್ಕೆ ಪ್ರತಿಕ್ರಿಯಿಸಿದ್ದ ಮಂಡಳಿ ಅಧ್ಯಕ್ಷರು, ತಾವು ಮಸೀದಿಯನ್ನು ಯಾರೊಬ್ಬರಿಗೂ ನೀಡುವುದಿಲ್ಲ ಎಂದು ಹೇಳಿದರು. ಶತಮಾನಕ್ಕಿಂತಲೂ ಹಳೆಯದಾದ ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದ ಈಗ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News