ಪಕೋಡಾ ತಯಾರಿಸುವುದೂ ಒಂದು ಕಲೆ: ಆನಂದಿಬೆನ್ ಪಟೇಲ್

Update: 2018-02-11 15:54 GMT

ಭೋಪಾಲ್, ಫೆ.11: ಪ್ರಧಾನಿ ಮೋದಿಯವರ ಪಕೋಡಾ ಹೇಳಿಕೆಯನ್ನು ವಿಪಕ್ಷಗಳು ಪ್ರಬಲ ಅಸ್ತ್ರವಾಗಿ ಬಳಸಿಕೊಂಡು ಪ್ರಧಾನಿ ಹೋದಲ್ಲೆಲ್ಲಾ ಪಕೋಡಾ ಸ್ಟಾಲ್‌ಗಳನ್ನು ಹಾಕಿ ಪ್ರತಿಭಟನೆ ನಡೆಸುತ್ತಿವೆ. ಇದರಿಂದ ಬಿಜೆಪಿಗೆ ತೀವ್ರ ಮುಜುಗರವಾಗುತ್ತಿದ್ದರೂ ಏನಾದರೊಂದು ಸಮಜಾಯಿಷಿ ನೀಡುತ್ತಲೇ ಬಂದಿದೆ. ಇದೀಗ ಮಧ್ಯಪ್ರದೇಶದ ರಾಜ್ಯಪಾಲೆ ಮತ್ತು ಗುಜರಾತ್‌ನ ಮಾಜಿ ಮುಖ್ಯಮಂತ್ರಿಯಾಗಿರುವ ಆನಂದಿಬೆನ್ ಪಟೇಲ್ ಪಕೋಡಾ ಮಾಡುವುದೂ ಒಂದು ಕಲೆ ಎನ್ನುವ ಮೂಲಕ ಮೋದಿ ಸಿದ್ಧಾಂತವನ್ನು ಸಮರ್ಥಿಸಲು ಮುಂದಾಗಿದ್ದಾರೆ.

ಪಕೋಡಾ ಮಾಡುವುದು ಒಂದು ಕಲೆ. ನೀವು ಒಳ್ಳೆಯ ರುಚಿಯಾದ ಪಕೋಡ ಮಾಡದಿದ್ದರೆ ಗ್ರಾಹಕರು ನಿಮ್ಮ ಬಳಿ ಬರುವುದಿಲ್ಲ ಎಂದವರು ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. "ಇದು ಕೆಟ್ಟ ಉದ್ಯೋಗ ಎಂದು ನನಗನಿಸುವುದಿಲ್ಲ. ಒಬ್ಬ ವ್ಯಕ್ತಿ ಎರಡು ವರ್ಷ ಪಕೋಡಾ ಮಾಡಿದರೆ ಮೂರನೇ ವರ್ಷಕ್ಕೆ ಸಣ್ಣ ಹೊಟೇಲ್ ತೆರೆಯಬಹುದು" ಮತ್ತು ಐದಾರು ವರ್ಷಗಳಲ್ಲಿ ಆತ ದೊಡ್ಡ ಹೊಟೇಲನ್ನೇ ನಿರ್ಮಿಸಬಹುದು ಎಂದು ಪಟೇಲ್ ತಿಳಿಸಿದ್ದಾರೆ.

ಚಿಂಡ್ವಾರಾದಲ್ಲಿ ನಡೆದ ಗೊಂಡ್ ಮಹಾಸಭಾದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಪಟೇಲ್ ಈ ಮಾತುಗಳನ್ನು ಆಡಿದ್ದಾರೆ.

ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುವ ವೇಳೆ ಉದ್ಯೋಗ ಸೃಷ್ಟಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರಧಾನಿ ಮೋದಿ ಪಕೋಡ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಸೇರಿದಂತೆ ವಿಪಕ್ಷದ ಬಹುತೇಕ ನಾಯಕರು ಮೋದಿಯ ಈ ಹೇಳಿಕೆಯನ್ನು ಪ್ರಬಲವಾಗಿ ಖಂಡಿಸಿದ್ದರು. ಬಹುಶಃ ಈ ಸರಕಾರ ಮುಂದೆ ಭಿಕ್ಷುಕರನ್ನೂ ಉದ್ಯೋಗಿಗಳೆಂದು ಹೇಳಬಹುದು ಎಂದು ಚಿದಂಬರಂ ವ್ಯಂಗ್ಯವಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News