ಲೋಕ ಅದಾಲತ್‌ಗೆ ಸೇರಿದ ಮೊದಲ ಲೈಂಗಿಕ ಅಲ್ಪಸಂಖ್ಯಾತೆ ವಿದ್ಯಾ

Update: 2018-02-11 16:14 GMT

ನಾಗಪುರ, ಫೆ. 11: ಎಲ್‌ಜಿಬಿಟಿ ಸಮುದಾಯದ ಜನರಿಗೆ ಬೆಂಬಲ ನೀಡುವ ಬದಲು ಅವರನ್ನು ತಾರತಮ್ಯದಿಂದ ಕಾಣಲಾಗುತ್ತಿದೆ ಎಂದು ರಾಷ್ಟ್ರೀಯ ಲೋಕ ಅದಾಲತ್‌ನ ನ್ಯಾಯಾಂಗ ಪೀಠದ ಸದಸ್ಯೆಯಾಗಿರುವ ಲೈಂಗಿಕ ಅಲ್ಪಸಂಖ್ಯಾತೆ ವಿದ್ಯಾ ಕಾಂಬ್ಲೆ ಹೇಳಿದ್ದಾರೆ.

 ಸುಮಾರು 10 ವರ್ಷಗಳಿಂದ ಎಲ್‌ಜಿಬಿಟಿ ಸಮುದಾಯಕ್ಕಾಗಿ ಹೋರಾಟ ನಡೆಸುತ್ತಿರುವ ವಿದ್ಯಾ ಕಾಂಬ್ಲೆ (29) ರಾಜ್ಯದ ಲೋಕ ಅದಾಲತ್‌ನ ಸದಸ್ಯ ಪೀಠದ ಮೊದಲ ಲೈಂಗಿಕ ಅಲ್ಪಸಂಖ್ಯಾತೆ ಎಂದು ಜಿಲ್ಲಾ ಕಾನೂನು ನೆರವು ಸಮಿತಿ ಕಾರ್ಯದರ್ಶಿ ಕುನಾಲ್ ಜಾಧವ್ ಪ್ರತಿಪಾದಿಸಿದ್ದಾರೆ.

 ನಾಗಪುರ ಜಿಲ್ಲಾ ನ್ಯಾಯಾಲಯದಲ್ಲಿ ಏರ್ಪಡಿಸಲಾಗಿದ್ದ ಲೋಕ ಅದಾಲತ್ ಪೀಠ ಇವರನ್ನು ಕೂಡ ಒಳಗೊಂಡಿತ್ತು. ಭವಿಷ್ಯ ನಿಧಿ ಕಂಪೆನಿ ಹಾಗೂ ವೈದ್ಯಕೀಯ ವಿಮಾ ಪಾಲಿಸಿದಾರನ ನಡುವಿನ 19 ಲಕ್ಷ ರೂ. ವಿವಾದವನ್ನು ಕೂಡ ಈ ಅದಾಲತ್‌ನಲ್ಲಿ ಪರಿಹರಿಸಲಾಗಿದೆ ಎಂದು ಕಾಂಬ್ಲೆ ಹೇಳಿದ್ದಾರೆ.

 ಲೋಕ ಅದಾಲತ್‌ನ ಭಾಗವಾಗಿದ್ದೀರಿ. ಏನನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ‘‘ಪೀಠದ ಇತರ ಸದಸ್ಯರು ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಪೀಠದ ಭಾಗವಾಗಲು ಜಿಲ್ಲಾ ಕಾನೂನು ನೆರವು ಸಮಿತಿಯ ಕಾರ್ಯದರ್ಶಿ ನನಗೆ ಅವಕಾಶ ನೀಡಿದರು’’ ಎಂದು ಅವರು ಹೇಳಿದ್ದಾರೆ.

 ‘‘ಕಳೆದ 9 ದಿನಗಳಿಂದ, ಪ್ರಕರಣಗಳ ಪರಿಶೀಲನೆಯಲ್ಲಿ ನಾನು ಭಾಗಿಯಾಗಿದ್ದೇನೆ. ಪ್ರಕರಣವೊಂದನ್ನು ಪರಿಹರಿಸಿರುವುದರಿಂದ ಬಾಲಕಿಯೋರ್ವಳು 19 ಲಕ್ಷ ರೂ. ವೈದ್ಯಕೀಯ ವಿಮೆ ಪಡೆಯಲು ಸಾಧ್ಯವಾಗಿದೆ’’ ಎಂದು ಕಾಂಬ್ಲೆ ಹೇಳಿದ್ದಾರೆ.

‘‘ಒಂದು ವೇಳೆ ಅಂಗವಿಕಲ ಮಗು ಜನಿಸಿದರೆ ಆಕೆ ಅಥವಾ ಆಥವಾ ಎಸೆಯುವುದಿಲ್ಲ. ಹಾಗಾದರೆ ತೃತೀಯ ಲಿಂಗಿಗಳು ಜನಿಸಿದರೆ ನಿರಾಕರಿಸುವುದು ಯಾಕೆ’’ ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News