ಮಣಿಪುರ ನಕಲಿ ಎನ್‌ಕೌಂಟರ್ ಪ್ರಕರಣ: ತನಿಖೆಯ ಪ್ರಗತಿ ಬಗ್ಗೆ ಅತೃಪ್ತಿ ಸೂಚಿಸಿದ ಸುಪ್ರೀಂ

Update: 2018-02-12 13:55 GMT

ಹೊಸದಿಲ್ಲಿ, ಫೆ.12: ಮಣಿಪುರದಲ್ಲಿ ಭದ್ರತಾ ಪಡೆಗಳು ನಕಲಿ ಎನ್‌ಕೌಂಟರ್ ಮೂಲಕ ಹಲವರನ್ನು ಹತ್ಯೆ ಮಾಡಿವೆ ಎಂಬ ಆರೋಪದ ಕುರಿತು ಸಿಬಿಐಯ ವಿಶೇಷ ತನಿಖಾ ತಂಡ(ಎಸ್‌ಐಟಿ) ನಡೆಸುತ್ತಿರುವ ತನಿಖೆಯ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

 ಸೇನೆ, ಅಸ್ಸಾಂ ರೈಫಲ್ಸ್ ಹಾಗೂ ಪೊಲೀಸರು ನಡೆಸಿದ್ದಾರೆ ಎನ್ನಲಾದ ನ್ಯಾಯಾತಿರಿಕ್ತ ಹತ್ಯೆ ಹಾಗೂ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದ 42 ಪ್ರಕರಣಗಳು ದಾಖಲಾಗಿವೆ ಎಂದು ಎಸ್‌ಐಟಿ ಸುಪ್ರೀಂಕೋರ್ಟ್‌ಗೆ ತಿಳಿಸಿತು. ಆದರೆ ವಿಚಾರಣೆಯಲ್ಲಿ ಆಗಿರುವ ಪ್ರಗತಿಯ ಕುರಿತು ತನಗೆ ಅಸಮಾಧಾನವಿದೆ ಎಂದು ನ್ಯಾಯಾಧೀಶರಾದ ಎಂ.ಬಿ.ಲೋಕೂರ್ ಹಾಗೂ ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ಪ್ರತಿಕ್ರಿಯಿಸಿತು. ಅಲ್ಲದೆ 42 ಪ್ರಕರಣಗಳಲ್ಲಿ 17ರ ವಿಚಾರಣೆಯ ಸಂದರ್ಭ ಎಸ್‌ಐಟಿಗೆ ನೆರವಾಗಲು ಮೂವರನ್ನು ತಾತ್ಕಾಲಿಕವಾಗಿ ನಿಯೋಜಿಸುವಂತೆ ರಾಷ್ಟ್ರೀಯ ಮಾನವಹಕ್ಕು ಆಯೋಗಕ್ಕೆ ಸೂಚಿಸಿತು.

 ಅಲ್ಲದೆ ಎಸ್‌ಐಟಿ ಸಲ್ಲಿಸಿದ ಯಥಾಸ್ಥಿತಿ ವರದಿಯಲ್ಲಿ ಸಿಬಿಐ ನಿರ್ದೇಶಕರ ಅನುಮೋದನೆ ಪಡೆಯದಿರುವ ಕುರಿತೂ ಅಸಮಧಾನ ಸೂಚಿಸಿತು ಹಾಗೂ ಮುಂದಿನ ಯಥಾಸ್ಥಿತಿ ವರದಿಗೆ ಸಿಬಿಐ ನಿರ್ದೇಶಕರ ಅನುಮೋದನೆ ಪಡೆಯಲೇ ಬೇಕು ಎಂದು ನಿರ್ದೇಶಿಸಿ ಮುಂದಿನ ವಿಚಾರಣೆಯನ್ನು ಮಾ.12ಕ್ಕೆ ಮುಂದೂಡಿತು. ಮಣಿಪುರದಲ್ಲಿ ನಡೆದಿರುವ ಸುಮಾರು 1,528 ನ್ಯಾಯಾತಿರಿಕ್ತ ಹತ್ಯೆ ಪ್ರಕರಣಗಳ ವಿಚಾರಣೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News