ಜೆಎನ್‌ಯುನಲ್ಲಿ ಉಚಿತ ಕನ್ನಡ ತರಗತಿ ಪ್ರಾರಂಭಿಸಿದ ಪುರುಷೋತ್ತಮ ಬಿಳಿಮಲೆ

Update: 2018-02-12 16:20 GMT

ಹೊಸದಿಲ್ಲಿ, ಫೆ.12: ದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯಲ್ಲಿ ಕನ್ನಡ ಅಧ್ಯಯನ ಪೀಠ 2015ರಲ್ಲಿ ಸ್ಥಾಪನೆಯಾಗಿದ್ದರೂ ಇದುವರೆಗೆ ಒಂದೂ ಪಿಎಚ್‌ಡಿ ಮತ್ತು ಎಂಫಿಲ್ ಸೀಟುಗಳು ಹಂಚಿಕೆಯಾಗಿಲ್ಲ. ಇದೀಗ ಕನ್ನಡ ಅಧ್ಯಯನ ಪೀಠದ ಉಳಿವಿಗಾಗಿ ಪೀಠದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಉಚಿತ ಕನ್ನಡ ತರಗತಿಯನ್ನು ಆರಂಭಿಸಿದ್ದಾರೆ.

ವಿವಿಯಲ್ಲಿ ಈಗಾಗಲೇ ಜನಸಮೂಹದ ನೆರವಿನಿಂದ 12,000ಕ್ಕೂ ಹೆಚ್ಚು ಪುಸ್ತಕಗಳಿರುವ ಲೈಬ್ರೆರಿ ಸ್ಥಾಪಿಸಿರುವ ಬಿಳಿಮಲೆ, ಪಠ್ಯ ಹಾಗೂ ಪರಿಚಯ ಪತ್ರಿಕೆ ತಯಾರಿಸಿದ್ದಾರೆ. ಅಲ್ಲದೆ ಕನ್ನಡದ ಶ್ರೇಷ್ಠ ಪುಸ್ತಕಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡುವ ಕಾರ್ಯವನ್ನೂ ಕೈಗೆತ್ತಿಕೊಂಡಿದ್ದಾರೆ.

ಇದೀಗ 40 ವಿದ್ಯಾರ್ಥಿಗಳು ಉಚಿತ ಕನ್ನಡ ತರಗತಿಗೆ ಸೇರಿದ್ದಾರೆ. ವಿವಿಯ ವಿದ್ಯಾರ್ಥಿಗಳಲ್ಲದೆ ಹೊರಗಿನ ವ್ಯಕ್ತಿಗಳೂ ಕನ್ನಡ ಕಲಿಯಲು ಆಸಕ್ತಿ ತೋರಿದ್ದಾರೆ. ಆರು ತಿಂಗಳ ಅಧ್ಯಯನ ಬಳಿಕ ಅವರು ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದ್ದಾರೆ. ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸಂಜೆ 4ರಿಂದ 6 ಗಂಟೆಯವರೆಗೆ ತರಗತಿಗಳು ನಡೆಯುತ್ತವೆ. ಕೋರ್ಸ್ ಪೂರ್ಣಗೊಳಿಸಿದವರಿಗೆ ಯಾವುದೇ ಪ್ರಮಾಣ ಪತ್ರ ನೀಡುವುದಿಲ್ಲ ಎಂದವರು ತಿಳಿಸಿದ್ದಾರೆ.

 ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ ಕನ್ನಡದ ಪ್ರೊಫೆಸರ್ ಆಗಿದ್ದ ಬಿಳಿಮಲೆ, 2015ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಜೆಎನ್‌ಯು ವಿವಿಯ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾಗಿ ನೇಮಕವಾಗಿದ್ದರು. ಕರ್ನಾಟಕ ಸರಕಾರ ಹಾಗೂ ಜೆಎನ್‌ಯು ನಡುವೆ ನಡೆದ ಒಪ್ಪಂದದ ಪ್ರಕಾರ ಜೆಎನ್‌ಯುನಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆಯಾಗಿತ್ತು. ಪೀಠದಲ್ಲಿ ಎಂಫಿಲ್ ಅಥವಾ ಪಿಎಚ್‌ಡಿ ಅಧ್ಯಯನ ನಡೆಸಲು ರಾಜ್ಯ ಸರಕಾರ ವಾರ್ಷಿಕ 43 ಲಕ್ಷ ರೂ. ಒದಗಿಸುತ್ತದೆ. ಆದರೆ 2016ರಲ್ಲಿ ವಿವಿಯು ಸೀಟು ಹಂಚಿಕೆಯನ್ನು ಕಡಿತ ಮಾಡುವ ಮೂಲಕ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಬಿಳಿಮಲೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News