ಮೈಸೂರಿಗೆ ಆಗಮಿಸಿದ ಸ್ವಚ್ಛ ಸರ್ವೇಕ್ಷಣಾ ತಂಡ

Update: 2018-02-12 16:44 GMT

ಮೈಸೂರು,ಫೆ.12: ಸತತ ಎರಡು ಬಾರಿ ಸ್ವಚ್ಛತಾನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೈಸೂರಿಗೆ ಸ್ವಚ್ಛ ಸರ್ವೇಕ್ಷಣಾ ತಂಡ ಭೇಟಿ ನೀಡಿದೆ.

ಸೋಮವಾರ ಬೆಳಿಗ್ಗೆ ನಿಗದಿತ ಅವಧಿಯಲ್ಲಿ ಮೊದಲು ಮೈಸೂರು ಮಹಾನಗರಪಾಲಿಕೆಗೆ ತಂಡ ಆಗಮಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಇದಕ್ಕೆ 1400 ಅಂಕ ನಿಗದಿ ಮಾಡಲಾಗಿದೆ. ಇದೇ ವೇಳೆ ಪೌರಕಾರ್ಮಿಕರ ಹಾಜರಾತಿಗೆ ಸಂಬಂಧಿಸಿದಂತೆ ಜಾರಿಗೆ ತಂದಿರುವ ಬಯೋಮೆಟ್ರಿಕ್ ಪದ್ಧತಿ, ವಿವಿಧ ಕಾಮಗಾರಿಗಳ ಟೆಂಡರ್, ವಾಹನಗಳಿಗೆ ಅಳವಡಿಸಿರುವ ಜಿಪಿಎಸ್ ಎಲ್ಲವನ್ನೂ ಪರಿಶೀಲಿಸಿದೆ.

ಈ ಕುರಿತು ನಗರ ಪಾಲಿಕೆಯ ಆಯುಕ್ತ ಜಿ.ಜಗದೀಶ್ ಮಾತನಾಡಿ, ದೆಹಲಿಯಲ್ಲಿರುವ ಸ್ವಚ್ಛತಾ ತಂಡದ ನಿರ್ದೇಶನದ ಮೇರೆಗೆ ಸ್ಥಳ ಪರಿಶೀಲನೆಯನ್ನು ಮೂರು ದಿನಗಳ ಕಾಲ ಮಾಡಲಿದೆ, ನಗರದಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಖುದ್ದು ವಾರ್ಡ್ ಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಲಿದೆ. ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದೆ. ಸುಮಾರು ಒಂದು ಸಾವಿರ ಸಾರ್ವಜನಿಕರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಿದೆ. ಅವರಿಗೆ ಆರು ಪ್ರಶ್ನೆಗಳನ್ನು ಕೇಳಲಿದೆ. ಈ ಬಾರಿಯ ಸ್ವಚ್ಛತಾ ಸಮೀಕ್ಷೆಯಲ್ಲಿ ಪಾಲಿಕೆಯಿಂದ ಮಾಹಿತಿ ಸಂಗ್ರಹ ಮತ್ತು ಸಂವಹನಕ್ಕೆ 1,400ಅಂಕ, ಸ್ಥಳ ಭೇಟಿಗೆ 1,200ಅಂಕ ನಿಗದಿ ಮಾಡಲಾಗಿದೆ. ಸ್ವಚ್ಛತಾ ಬಳಕೆ ಆಪ್ ಸೇರಿದಂತೆ ಸಾರ್ವಜನಿಕರ ಫೀಡ್ ಬ್ಯಾಕ್ ಗೆ 1,400ಅಂಕವನ್ನೂ ನಿಗದಿ ಮಾಡಲಾಗಿದೆ. ಸ್ವಚ್ಛತಾ ಆಪ್ ಬಳಕೆಗೆ ನಿಗದಿಯಾಗಿರುವ 400ಪೂರ್ಣ ಅಂಕವನ್ನು ಪಾಲಿಕೆ ಈಗಾಗಲೇ ಪಡೆದುಕೊಂಡಿದೆ ಎಂದರು. ತಂಡದಲ್ಲಿ ಸಮೀಕ್ಷಣಾಧಿಕಾರಿಗಳಾದ ಅಜಯ್, ಚೈತನ್ಯ, ಶೋಚ್ತಾ ಇದ್ದು, ಮೊಹಮ್ಮದ್ ಹಾಗೂ ಪೂಜಾ ತಂಡವನ್ನು ಸೇರಿಕೊಳ್ಳಲಿದ್ದಾರೆ.

2017ರ ಸಮೀಕ್ಷೆಯಲ್ಲಿ 500 ನಗರಗಳು ಮಾತ್ರ ಭಾಗವಹಿಸಿದ್ದು, ಈ ಬಾರಿ ಹೆಚ್ಚಿನ ನಗರ ಭಾಗವಹಿಸುವ ನಿರೀಕ್ಷೆಯಿದೆ. ಫೆ.15ರವರೆಗೂ ಮೈಸೂರಿನಲ್ಲಿ ಸಮೀಕ್ಷೆ ನಡೆಸಲಿದೆ. ಅದಕ್ಕಾಗಿ ಪಾಲಿಕೆ ಎಲ್ಲ ರೀತಿಯಿಂದಲೂ ಸಿದ್ಧತೆ ಮಾಡಿಕೊಂಡಿದೆ.

2018ರ ಸಮೀಕ್ಷೆ ಜ.4ರಿಂದ ದೇಶಾದ್ಯಂತ ಆರಂಭಗೊಂಡಿದ್ದು, 2018ರ ಸಮೀಕ್ಷೆಯಲ್ಲಿ 4,014ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳು ಭಾಗವಹಿಸುತ್ತಿದೆ.  ಕಳೆದ ಬಾರಿ ಸ್ವಚ್ಛ ಸಮೀಕ್ಷೆಗೆ 2000 ಅಂಕ ನಿಗದಿ ಮಾಡಲಾಗಿತ್ತು. ಆದರೆ ಈ ಬಾರಿ 4000 ಅಂಕ ನಿಗದಿ ಮಾಡಲಾಗಿದೆ. ಈ ಬಾರಿಯೂ ಮೈಸೂರು ಸ್ವಚ್ಛನಗರಿ ಪಟ್ಟವನ್ನು ಅಲಂಕರಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News