‘ಸೌಭಾಗ್ಯ’ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿ: ಸಂಸದ ಪ್ರತಾಪ್ ಸಿಂಹ ಸೂಚನೆ

Update: 2018-02-12 17:55 GMT

ಮಡಿಕೇರಿ, ಫೆ.12: ಜಿಲ್ಲೆಯಲ್ಲಿ ಯಾವ ಯಾವ ಕುಟುಂಬಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಅಂತಹ ಮನೆಗಳನ್ನು ಗುರುತಿಸಿ ‘ಸೌಭಾಗ್ಯ’ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮವಹಿಸುವಂತೆ ತಾ.ಪಂ.ಇಒ ಹಾಗೂ ಸೆಸ್ಕ್ ಎಂಜಿನಿಯರ್ ಗಳಿಗೆ ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.    

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಉಸ್ತುವಾರಿ ಹಾಗೂ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇನ್ನೂ 9 ಸಾವಿರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಅದ್ದರಿಂದ ಒಂದು ತಿಂಗಳಲ್ಲಿ ವಿದ್ಯುತ್ ಇಲ್ಲದ ಕುಟುಂಬಗಳ ಪಟ್ಟಿ ತಯಾರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳುವಂತೆ ಸಂಸದರು ಸೂಚನೆ ನೀಡದರು. 

ಜಿಲ್ಲೆಯಲ್ಲಿ ಅದಿವಾಸಿ ಬುಡಕಟ್ಟು ಜನರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅರಣ್ಯದಲ್ಲಿ ವಾಸಮಾಡುತ್ತಿದ್ದಾರೆ. ಇವರಿಗೆ ಇನ್ನೂ ಸಹ ವಿದ್ಯುತ್ ಸಂಪರ್ಕ, ಕುಡಿಯುವ ನೀರು ವಸತಿ ಮತ್ತಿತರ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ. ಇಂತಹ ಹಾಡಿಗಳನ್ನು ಗುರುತಿಸಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರತಾಪ್ ಸಿಂಹ ಅವರು ಸೂಚನೆ ನೀಡಿದರು.    

ಸ್ವಚ್ಚ ಭಾರತ್ ಮೀಷನ್ ರಡಿ ಶೌಚಾಲಯ ಇಲ್ಲದ ಕುಟುಂಬಳಿಗೆ ಹೊಸ ಶೌಚಾಲಯ ನಿರ್ಮಿಸಿಕೊಡಬೇಕು. ಪರಿಸರ ಶುಚಿತ್ವಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿಗಾ ವಹಿಬೇಕಿದೆ. ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ, ಕಸ ಹಾಕಬೇಕಿದೆ ಎಂದು ಪ್ರತಾಪ್ ಸಿಂಹ ಅವರು ಸಲಹೆ ಮಾಡಿದರು.      

ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ವಿರಾಜಪೇಟೆ ತಾಲೂಕಿನ ಕಾರೆಹಡ್ಲು ಚೇನಿಹಡ್ಲು ಮತ್ತಿತರ ಗಿರಿಜನ ಹಾಡಿಗಳಿಗೆ ರಸ್ತೆ, ಕುಡಿಯುವ ನೀರು ವಿದ್ಯುತ್ ಸಂಪರ್ಕ ವಸತಿ ಮತ್ತೀತರ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಮತ್ತೊಂದು ದಿಡ್ಡಳ್ಳಿ ಆಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅವರು ಸೂಚನೆ ನೀಡಿದರು. 

ಅರಣ್ಯ ಇಲಾಖೆ ಅಧಿಕಾರಿಗಳು ಆನೆ, ಹುಲಿ ರಕ್ಷಣೆ ಮಾಡುವುದರ ಜೊತೆಗೆ, ಮನುಷ್ಯರ ರಕ್ಷಣೆಯೂ ಸಹ ಅತೀ ಮುಖ್ಯ ಎಂಬುದನ್ನು ತಿಳಿಯಬೇಕು ಎಂದ ಅವರು, ಕೊಡಗು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಇಲ್ಲದಿದ್ದರೆ ಹೇಗೆ ಎಂದು ನುಡಿದರು. ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಖ್ ಯೋಜನೆ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿಲ್ಲ. ಬಾಳೆಲೆ ವಿಭಾಗಲ್ಲಿ ಸಿಂಗಲ್ ಫ್ಯೂಜ್ ವಿದ್ಯುತ್ ಪೂರೈಕೆ ಆಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸುವಂತೆ ಸೆಸ್ಕ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಈ ಸಂಬಂಧ ಸಮರ್ಪಕ ವಿದ್ಯುತ್ ಪೂರೈಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. 

ಅರಣ್ಯ ಅಧಿಕಾರಿಗಳು ಅರಣ್ಯ ಹಕ್ಕು ಕಾಯ್ದೆಗಳನ್ನು ಸಮರ್ಪಕವಾಗಿ ಅನುಷ್ಠಾಗೊಳಿಸಬೇಕು. ಅದನ್ನು ಬಿಟ್ಟು ಪರಿಸರ ಸೂಕ್ಷ್ಮತಾಣ ಮತ್ತಿತರ ಹೆಸರಿನಲ್ಲಿ ಗಿರಿಜನರಿಗೆ ತೊಂದರೆ ಕೊಡುವುದು ಕಂಡುಬಂದರೆ ವಿದ್ಯುತ್, ಕುಡಿಯುವ ನೀರನ್ನು ಸ್ಥಗಿತ ಗೊಳಿಸಬೇಕಾಗುತ್ತದೆ ಎಂದು ಕೆ.ಜಿ.ಬೋಪಯ್ಯಎಚ್ಚರಿಕೆ ನೀಡಿದರು. 

ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಮಾತನಾಡಿ, ಕಚೇರಿ ಮುಖ್ಯಸ್ಥರು ಕೆಳ ಹಂತದ ಅಧಿಕಾರಿಗಳು ಸಭೆ ಕಳುಹಿಸಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದು ತಪ್ಪಬೇಕು ಎಂದ ಅವರು, ಈ ಸಂಬಂಧ ಸಭೆಗೆ ಆಗಮಿಸದಿರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಜೊತೆಗೆ ಇಲಾಖೆಗಳ ರಾಜ್ಯಮಟ್ಟದ ಗಮನಕ್ಕೆ ತರಬೇಕಿದೆ ಎಂದು ಹೇಳಿದರು.   

ಸಮಿತಿ ಸದಸ್ಯರಾದ ಸುಭಾಷ್ ನಾಣಯ್ಯ, ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ 06 ತಿಂಗಳಿಗೊಮ್ಮೆ ವಿದ್ಯುತ್ ಬಿಲ್ಲನ್ನು ನೀಡುತ್ತಾರೆ. ಇದರಿಂದ ಗ್ರಾಮೀಣ ಕುಟುಂಬಗಳು ವಿದ್ಯುತ್ ಬಿಲ್ಲು ಪಾವತಿಸಲು ತೊಂದರೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಇನ್ನೂ ಮುಂದಾದರು ಗ್ರಾಮೀಣ ಪ್ರದೇಶದ ಕುಟುಂಬಳಿಗೆ ಪ್ರತಿ ತಿಂಗಳು ವಿದ್ಯುತ್ ಬಿಲ್ಲು ನೀಡಬೇಕು ಎಂದು ಮನವಿ ಮಾಡಿದರು.    

ತಾ.ಪಂ.ಅಧ್ಯಕ್ಷರಾದ ತೆಕಡೆ ಶೋಭಾ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಗಾಗಿ ಅನುಷ್ಠಾನಗೊಳಿಸಲು ಕೆಲವು ಮಾರ್ಪಾಡು ಮಾಡುವುದು ಅತ್ಯಗತ್ಯವಾಗಿದೆ ಎಂದು ಸಲಹೆ ಮಾಡಿದರು. 

ಸಮಿತಿ ಸದಸ್ಯರಾದ ಕುಶಾಲಪ್ಪ, ಶನಿವಾರ ಸಂತೆಯ ಸರ್ಕಾರಿ ಆಸ್ಪತ್ರೆ ಬಳಿ ಕಸವನ್ನು ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಸಂಕ್ರಾಮಿಕ ರೋಗಗಳು ಉಂಟಾಗುತ್ತಿದೆ. ಆದ್ದರಿಂದ ಕಸ ವಿಲೇವಾರಿಗೆ ಪ್ರತ್ಯೇಕ ಸ್ಥಳ ಗುರುತಿಸಬೇಕಿದೆ ಎಂದು ಹೇಳಿದರು.

ಸಮಿತಿ ಸದ್ಯಸರಾದ ಮನುಮುತ್ತಪ್ಪ ಮಾತನಾಡಿ, ಕೊಡಗು ಪ್ರವಾಸಿ ಕೇಂದ್ರವಾದ ನಂತರ ಎಲ್ಲೆಂದರಲ್ಲಿ ಕಸವನ್ನು ಬಿಸಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಮತ್ತು ಶುಚಿತ್ವ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು. ಭಾಗಮಂಡಲದ ತ್ರಿವೇಣಿ ಸಂಗಮ ಸುತ್ತಮುತ್ತ ಪ್ರವಾಸಿಗರು ಅಡುಗೆ ಮಾಡಿ ಪ್ಲಾಸ್ಟಿಕ್ ಬಟಲುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಹಾಗೂ ಕಸವನ್ನು ಹಾಕುವುದು ಕಂಡು ಬರುತ್ತಿದೆ. ಇದನ್ನು ತುರ್ತಾಗಿ ಸ್ಥಗಿತ ಗೊಳಿಸಬೇಕಾಗಿದೆ. ಆದ್ದರಿಂದ ಅಡುಗೆ ಮಾಡುವ ಪ್ರವಾಸಿಗರಿಗೆ ಪ್ರತ್ಯೇಕವಾಗಿ ಒಂದು ಏಕರೆ ಜಾಗವನ್ನು ಗುರುತಿಸಿ ಅಡುಗೆ ಮಾಡಲು ಅವಕಾಶ ಮಾಡಬೇಕಿದೆ ಎಂದು ಅವರು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ದೇವಾಲಯ ಸಮಿತಿ ಈ ಬಗ್ಗೆ ಕ್ರಮ ವಹಿಸಬೇಕಿದೆ. ಜೊತೆಗೆ ಆಶುಚಿತ್ವ ಮಾಡುವವರಿಗೆ ದಂಡ ವಿಧಿಸಬೇಕಿದೆ. ಇದರಿಂದ ಸರಿ ದಾರಿಗೆ ಬರಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಶುಚಿತ್ವ ಕಾಪಾಡುವ ಬಗ್ಗೆ ಹಾಗೂ ದಂಡ ಸಂಭಂಧಿಸಿದಂತೆ ನಾಮಫಲಕ ಆಳವಡಿಸಬೇಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಫ್ಲಾಸ್ಟಿಕ್ ಬ್ಯಾನ್ ಅಗಿದ್ದರೂ ಸಹ ಫ್ಲಾಸ್ಟಿಕ್ ಬಳಕೆ ಕಡಿಮೆಯಾಗಿಲ್ಲ. ಆದ್ದರಿಂದ ಈ  ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್, ಸಮಿತಿ ಸದಸ್ಯರಾದ ಡಾ|| ನವೀನ್, ವಿಜಯ, ದೇವರಾಜು, ಸುಮಂತ್ ಇತರರು ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಐ.ಟಿಡಿ.ಪಿ ಇಲಾಖೆ ಅಧಿಕಾರಿ ಪ್ರಕಾಶ್ ಇಲಾಖಾ ಕಾರ್ಯಕ್ರಮಗಳ ಮಾಹಿತಿ ನೀಡದರು. ಈ.ಪಂ. ಯೋಜನಾ ನಿರ್ದೆಶಕರು ಸಿದ್ದಲಿಂಗ ಮೂರ್ತಿ, ಅರಣ್ಯ ಸೆಸ್ಕ್, ಇತರ  ನಾನಾ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಹಲವು ಮಾಹಿತಿ ನೀಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News